ಬೆಂಗಳೂರು : ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ (2025) ಅನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಲಾಗಿದ್ದು, ಟಿಎಸ್ ನಾಗಾಭರಣ ಮತ್ತು ಮತ್ತಿತರರು ಸೇರಿ ಹೈಕೋರ್ಟ್ ನಲ್ಲಿ ಈ ಕುರಿತು ಪಿ ಐ ಎಲ್ ಸಲ್ಲಿಸಿದರು. ವಿಚಾರಣೆ ನಡೆಸಿದ ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಗೆ ನೋಟಿಸ್ ನೀಡಿ ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಸೂಚನೆ ನೀಡಿದೆ.
ಹೈಕೋರ್ಟ್ ನಲ್ಲಿ ಈ ಕುರಿತು ಇಂದು ವಿಚಾರಣೆ ನಡೆಯಿತು. ಬಿಬಿಎಂಪಿಗೆ ಚುನಾವಣೆ ನಡೆದು ಹತ್ತು ವರ್ಷಗಳಾಗಿವೆ. ರಾಜ್ಯ ಸರ್ಕಾರದ ಹೊಸ ಕಾಯಿದೆಯಿಂದ ಚುನಾವಣೆ ಮತ್ತಷ್ಟು ವಿಳಂಬವಾಗಿದೆ. ಹಾಗಾಗಿ ಇದರಲ್ಲಿ ಸಂವಿಧಾನದ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಎಂಬಿ ನರಗುಂದ ವಾದ ಮಂಡಿಸಿದರು. ಬಳಿಕ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಇದೀಗ ಹೈಕೋರ್ಟ್ ನೋಟಿಸ್ ನೀಡಿದ್ದು, ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಗಳಿಗೆ ಸೂಚನೆ ನೀಡಿದೆ.
2025ರ ಮೇ 15ರಂದು ರಾಜ್ಯ ಸರ್ಕಾರ ಹೊರಡಿಸಿರುವ ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ ಪ್ರಶ್ನಿಸಿ ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಮತ್ತಿತರರು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ನ್ಯಾಯಪೀಠ, ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆ ಮುಂದೂಡಿದೆ.
ಅರ್ಜಿಯಲ್ಲಿ ಏನಿದೆ?
ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆಯು ಸಂವಿಧಾನದ 74ನೇ ತಿದ್ದುಪಡಿ (ಸ್ಥಳೀಯ ಸಂಸ್ಥೆಗಳಿಗೆ ಸಮಾನ ಸ್ಥಾನಮಾನ ನೀಡಿ ಅಧಿಕಾರ ವಿಕೇಂದ್ರಿಕರಣಕ್ಕೆ ಅವಕಾಶ ಕಲ್ಪಿಸಿರುವುದು)ಗೆ ತದ್ವಿರದ್ಧವಾಗಿದೆ. ಆದ್ದರಿಂದ ಕಾಯಿದೆಯು ಅಸಾಂವಿಧಾನಿಕ ಎಂಬುದಾಗಿ ಘೋಷಣೆ ಮಾಡಬೇಕು. ಬಿಬಿಎಂಪಿಗೆ ಮುಂದಿನ ಮೂರು ತಿಂಗಳಲ್ಲಿ ಚುನಾವಣೆ ನಡೆಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
30 ದಿನಗಳ ಅವಧಿ ಪೂರ್ಣಗೊಳ್ಳುವ ಮೊದಲು ಯಾವುದೇ ವ್ಯಕ್ತಿಯಿಂದ ಈ ಕರಡಿಗೆ ಸಂಬಂಧಿಸಿದಂತೆ ಸ್ವೀಕೃತವಾಗುವ ಆಕ್ಷೇಪಣೆ ಅಥವಾ ಸಲಹೆಗಳನ್ನು ಪರಿಗಣಿಸಲಾಗುವುದು. ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಕೊಠಡಿ ಸಂಖ್ಯೆ 436, 4ನೇ ಮಹಡಿ, ವಿಕಾಸಸೌಧ ವಿಳಾಸಕ್ಕೆ ಸಲ್ಲಿಸಬಹುದಾಗಿದೆ.