ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೋಷಾರೋಪ ನಿಗದಿ ಪಡಿಸುವ ಹಿನ್ನೆಲೆ ಇಂದು ಬೆಂಗಳೂರಿನ 57ನೇ CCH ನ್ಯಾಯಾಲಯಕ್ಕೆ ನಟ ದರ್ಶನ್, ಪವಿತ್ರಗೌಡ ಸೇರಿದಂತೆ ಕೊಲೆಯ ಪ್ರಕರಣದ ಎಲ್ಲ 17 ಆರೋಪಿಗಳು ಹಾಜರಾದರು. ಈ ವೇಳೆ ನ್ಯಾಯಾಧೀಶರು ಫೆಬ್ರವರಿ 25ಕ್ಕೆ ವಿಚಾರಣೆ ಮುಂದೂಡಿ, ಆದೇಶ ಹೊರಡಿಸಿದರು.
ಬಳಿಕ ರೇಣುಕಾಸ್ವಾಮಿ ಕೊಲೆ ಪ್ರಕರಣದ A1 ಆರೋಪಿ ಆಗಿರುವಂತಹ ಪವಿತ್ರ ಗೌಡ, ದೇವಸ್ಥಾನಕ್ಕೆ ಎಂದು ತೆರಳಲು ಪಕ್ಕದ ರಾಜ್ಯಕ್ಕೆ ತೆರಳಲು ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಒಂದು ತಿಂಗಳ ಕಾಲ ಹೊರ ರಾಜ್ಯಕ್ಕೆ ತೆರಳಲು ಅನುಮತಿ ನೀಡಿ ಎಂದು ಪವಿತ್ರ ಗೌಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಡಿಸೆಂಬರ್ ನಲ್ಲಿ ನಟ ದರ್ಶನ್ ಪವಿತ್ರ ಗೌಡ ಸೇರಿದಂತೆ ಕೊಲೆ ಆರೋಪಿಗಳಾದಂತಹ ಎಲ್ಲರಿಗೂ ಕೂಡ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಈ ವೇಳೆ ಬೆಂಗಳೂರು ಬಿಟ್ಟು ಎಲ್ಲಿಯೂ ತೆರಳದಂತೆ ಷರತ್ತು ವಿಧಿಸಿ ಜಾಮೀನು ನೀಡಿತ್ತು. ಆದರೆ ಇದೀಗ ಪವಿತ್ರಗೌಡ ಒಂದು ತಿಂಗಳುಗಳ ಕಾಲ ಹೊರರಾಜ್ಯಕ್ಕೆ ದೇವಸ್ಥಾನಕ್ಕೆ ತೆರಳಲು ಅನುಮತಿ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.