ಬೆಂಗಳೂರು : ಆರೋಗ್ಯ ಇಲಾಖೆಯು ರಾಜ್ಯಾದ್ಯಂತ ಇದೇ ಭಾನುವಾರ (ಡಿ.21) ಪಲ್ಸ್ ಪೋಲಿಯೊ ಕಾರ್ಯಕ್ರಮ ಹಮ್ಮಿಕೊಂಡಿದ್ದು, 5 ವರ್ಷದೊಳಗಿನ 62.40 ಲಕ್ಷ ಮಕ್ಕಳನ್ನು ತಲುಪುವ ಗುರಿ ಹಾಕಿಕೊಂಡಿದೆ.
ಪೋಲಿಯೊ ಹನಿ ವಿತರಣೆಗೆ 33,258 ಬೂತ್ಗಳನ್ನು ಗುರುತಿಸಲಾಗಿದೆ. 1,030 ಸಂಚಾರಿ ತಂಡಗಳು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ವಿವಿಧ ಸಾರ್ವಜನಿಕ ಪ್ರದೇಶಗಳಲ್ಲಿ ಲಸಿಕೆ ವಿತರಿಸಲಿವೆ. 2,096 ಟ್ರಾನ್ಸಿಟ್ ತಂಡಗಳನ್ನೂ ರಚಿಸಲಾಗಿದೆ. ಈ ಕಾರ್ಯಕ್ರಮಕ್ಕೆ 1.13 ಲಕ್ಷ ಕಾರ್ಯಕರ್ತರನ್ನು ಬಳಸಿಕೊಳ್ಳಲಾಗುತ್ತಿದೆ. 7,322 ಮೇಲ್ವಿಚಾರಕರನ್ನು ನೇಮಿಸಲಾಗಿದೆ.
ಐದು ವರ್ಷದೊಳಗಿನ ಎಲ್ಲ ಮಕ್ಕಳು ಲಸಿಕೆ ಪಡೆದುಕೊಳ್ಳಬೇಕು. ಈ ಮೂಲಕ ಪೋಲಿಯೊ ವಿರುದ್ಧದ ಹೋರಾಟದಲ್ಲಿ ವಿಜಯ ಸಾಧಿಸುವುದನ್ನು ಮುಂದುವರಿಸಲು ಕೈಜೋಡಿಸಬೇಕು. ರಾಜ್ಯದ ಎಲ್ಲ ಆಸ್ಪತ್ರೆಗಳು, ಗ್ರಾಮೀಣ ಪ್ರದೇಶ, ಗುಡ್ಡಗಾಡು ಪ್ರದೇಶ ಸೇರಿದಂತೆ ವಿವಿಧೆಡೆ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆ. ಪೋಲಿಯೊ ಹನಿ ಸಂಪೂರ್ಣ ಸುರಕ್ಷಿತವಾಗಿದ್ದು, ಯಾವುದೇ ವದಂತಿಗಳಿಗೆ ಕಿವಿಗೊಡಬಾರದು.
ಹತ್ತಿರದ ಲಸಿಕಾ ಕೇಂದ್ರ ಪತ್ತೆಗೆ ‘Nearby Vaccination centre Karnataka’ ಆ್ಯಪ್ ಇನ್ಸ್ಟಾಲ್ ಮಾಡಿಕೊಂಡು, ಕೇಂದ್ರ ಹುಡುಕಬಹುದು ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
https://twitter.com/KarnatakaVarthe/status/2001661550357287344?s=20








