ಬೆಂಗಳೂರು : ಇಂದು ಗೃಹ ಸಚಿವ ಜಿ ಪರಮೇಶ್ವರ್ ಅವರ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿ ನಡೆಸಿದ್ದಾರೆ. ಇನ್ನು ಈ ವಿಚಾರವಾಗಿ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ ಪರಮೇಶ್ವರ್ ಒಬ್ಬ ದಲಿತ ನಾಯಕ ಹೀಗಾಗಿ ಅವರ ಮೇಲೆ ಸೇಡಿನ ರಾಜಕಾರಣ ನಡೆಯುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಯ ಮೇಲೆ ಇಡಿ ದಾಳಿ ನಡೆಸಿದೆ. ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಆರಂಭಗೊಂಡು ಬಹಳ ವರ್ಷಗಳಾಗಿದೆ. ಪರಮೇಶ್ವರ್ ಒಬ್ಬ ದಲಿತ ನಾಯಕರು. ಹೀಗಾಗಿ ಸೇಡಿನ ರಾಜಕಾರಣ ನಡೆಯುತ್ತಿದೆ. ಕಾಂಗ್ರೆಸ್ಸಿನ ದಲಿತರು, ಬಡವರ ಹಿಂದುಳಿದವರ ಮೇಲೆ ದಾಳಿ ನಡೆಸಲಾಗಿದೆ. ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಮೇಲೆ ಈ ಹಿಂದೆ ಐಟಿ ದಾಳಿ ನಡೆಸಿತ್ತು.
ಈಗ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಲಿತ ನಾಯಕನನ್ನು ಟಾರ್ಗೆಟ್ ಮಾಡಲಾಗಿದೆ. ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿಯ ಯಾವ ನಾಯಕರ ಮೇಲೂ ಇಡಿ ದಾಳಿ ನಡೆಸಿಲ್ಲ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಹಳ ಆದರ್ಶನಾ? ಬಿ ವೈ ವಿಜಯೇಂದ್ರ, ಹೆಚ್‍ಡಿ ಕುಮಾರಸ್ವಾಮಿ ಬಹಳ ಪ್ರಾಮಾಣಿಕರ? ಇದೆಲ್ಲ ನೋಡಿದರೆ ಟಾರ್ಗೆಟ್ ಮಾಡುತ್ತಿದ್ದಾರೆ ಅನಿಸುತ್ತದೆ. ರಾಜಕೀಯ ಪ್ರೇರಿತವಾಗಿ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಮೇಲೆ ದಾಳಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.