ಬೆಂಗಳೂರು : ಕರ್ನಾಟಕ ಸರ್ಕಾರವು ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತರದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ-2025 ಸುಗ್ರೀವಾಜ್ಞೆಯನ್ನು ಜಾರಿಗೊಳ್ಳಿಸಿದ್ದು, ಮೈಕ್ರೋ ಫೈನಾನ್ಸ್ ಸಂಸ್ಥೆಗಳ ನಿಯಂತ್ರಣ ಕುರಿತು ಅನುಷ್ಠಾನದಲ್ಲಿರುವ ಸುಗ್ರೀವಾಜ್ಞೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹೆಚ್ಚು ಅಧಿಕಾರಗಳನ್ನು ನೀಡಿದ್ದು, ಸಾಲಗಾರರಿಗೆ ಯಾವುದೇ ರೀತಿಯ ಕಿರುಕುಳ ಆಗದಂತೆ ಮುನ್ನೆಚ್ಚರಿಗೆ ವಹಿಸಬೇಕು. ಮತ್ತು ನಿಯಮಾನುಸಾರ ಸಾಲಕೊಡುವವರಿಗೂ ತೊಂದರೆಯಾಗದಂತೆ ಗಮನಹರಿಸಬೇಕೆಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ಅವರು ಹೇಳಿದರು.
ಅವರು ಶನಿವಾರ ಸಂಜೆ ವಿಡಿಯೋ ಸಂವಾದದ ಮೂಲಕ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಮಹಾನಗರ ಪೊಲೀಸ್ ಆಯುಕ್ತರೊಂದಿಗೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ನಿಯಂತ್ರಣ ಕುರಿತು ಹೊರಡಿಸಲಾಗಿರುವ ಸುಗ್ರೀವಾಜ್ಞೆಯ ಅನುಷ್ಠಾನ ಕುರಿತು ಸಭೆ ಜರುಗಿಸಿ ಮಾತನಾಡಿದರು.
ಈ ಸುಗ್ರೀವಾಜ್ಞೆಯಿಂದ ನಿಯಮಾನುಸಾರ ಸಾಲ ನೀಡುವ ಲೇವಾದೇವಿಗಾರರಿಗೆ ಹಾಗೂ ಮನಿಲ್ಯಾಂಡರ್ ಅವರಿಗೆ ತೊಂದರೆ, ಕಿರುಕುಳ ಆಗದಂತೆ ಅಧಿಕಾರಿಗಳು ಗಮನ ಹರಿಸಬೇಕು. ಬಡವರು, ಮಹಿಳೆಯರು ಮತ್ತು ರೈತರಿಗೆ ಸಾಲ ವಸೂಲಾತಿಗಾಗಿ ಮೈಕ್ರೋ ಫೈನಾನ್ಸ್‍ದವರಿಂದ ಯಾವುದೇ ಕಿರುಕುಳ, ತೊಂದರೆ ಆಗದಂತೆ ಕ್ರಮ ಕೈಗೊಳ್ಳುವ ಉದ್ದೇಶದಿಂದ ಈ ಸುಗ್ರೀವಾಜ್ಞೆಯನ್ನು ಜಾರಿಗೆ ತರಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಬೆಳಿಗ್ಗೆ 9 ಗಂಟೆಗೆ ಮೊದಲು ಮತ್ತು ಸಂಜೆ 6 ಗಂಟೆಯ ನಂತರ ಸಾಲಗಾರರ ಮನೆಗೆ ಸಾಲ ವಸೂಲಾತಿಗಾಗಿ ಹೊಗಬಾರದು. ಬಲವಂತದ ವಸೂಲಾತಿಯನ್ನು ತಡೆಯಲು ಈ ಕಾನೂನು ಜಾರಿ ಮಾಡಲಾಗಿದೆ. ರಾಜ್ಯದಲ್ಲಿ 2022 ರಿಂದ 2025ರವರೆಗೆ ಇಂತಹ ಪ್ರಕರಣಗಳನ್ನು ಗಮನಸಿದಾಗ ಕಳೇದ 2 ತಿಂಗಳಲ್ಲಿ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗಿವೆ. ಮೈಕ್ರೋ ಫೈನಾನ್ಸ್‍ಗಳಿಂದ ಸಾಲ ಪಡೆದವರಿಗೆ ಆಗುವ ಕಿರುಕುಳವನ್ನು ತಪ್ಪಿಸಲು ಸುಗ್ರೀವಾಜ್ಞೆ ಜಾರಿಗೆ ತರಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಸುಗ್ರೀವಾಜ್ಞೆಯನ್ನು ಅಧಿಕಾರಿಗಳು ಸರಿಯಾಗಿ ಅಧ್ಯಯನ ಮಾಡಿ, ಜಾರಿ ಮಾಡಬೇಕು. ಡಿಸಿ, ಎಸ್‍ಪಿಗಳು ಪ್ರೊ ಆ್ಯಕ್ವೀವ್ ಆಗಿ ಕಾರ್ಯನಿರ್ವಹಿಸಬೇಕು. ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿ ಸಾಲ ವಸೂಲಾತಿಗಾಗಿ ಅನಗತ್ಯ ಕಿರುಕುಳ, ತೊಂದರೆ ಆಗುವಂತಹ ಪ್ರಕರಣಗಳನ್ನು ನಿಯಂತ್ರಿಸಿ, ಪ್ರಕರಣಗಳು (ಜೀರೊ) ಶೂನ್ಯ ಆಗುವಂತೆ ಕ್ರಮಕೈಗೊಳ್ಳಲು ಮುಖ್ಯಮಂತ್ರಿಗಳು ನಿರ್ದೇಶಿಸಿದರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಮಾನ್ಯ ಶಾಲಿನಿ ರಜನೀಶ ಅವರು ವಿಡಿಯೋ ಸಂವಾದ ನಿರ್ವಹಿಸಿ, ಡಿಸಿ, ಎಸ್‍ಪಿಗಳಿಗೆ ಮಾನ್ಯ ಮುಖ್ಯಮಂತ್ರಿಗಳು ನೀಡಿದ ಸಲಹೆ ಸೂಚನೆಗಳನ್ನು ಪಾಲಿಸುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ ತಮ್ಮ ಹಾಗೂ ಮುಖ್ಯ ಕಾರ್ಯದರ್ಶಿಗಳ ನಿರ್ದೇಶನದ ಮೇರೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿಯನ್ನು ಈಗಾಗಲೇ ಫೆಬ್ರವರಿ 1 ರಿಂದ ಪ್ರಾರಂಭಿಸಲಾಗಿದೆ. ಕಳೆದ 15 ದಿನಗಳಿಂದ ಇಲ್ಲಿಯವರೆಗೆ ಸಹಾಯವಾಣಿ ಮುಖಾಂತರ 20 ಮೈಕ್ರೋ ಫೈನಾನ್ಸ್‍ಗಳ ವಿರುದ್ಧ ಕುಂದಗೋಳ, ಹುಬ್ಬಳ್ಳಿ, ಧಾರವಾಡ, ನವಲಗುಂದ, ಕಲಘಟಗಿ ತಾಲ್ಲೂಕುಗಳಿಂದ ದೂರುಗಳು ದಾಖಲಾಗಿವೆ ಎಂದು ತಿಳಿಸಿದರು.
ದೂರುದಾರರಿಂದ ದಾಖಲಿಸಿಕೊಂಡಿರುವ ದೂರುಗಳನ್ನು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಹಾಗೂ ಮಹಾನಗರ ಪೊಲೀಸ್ ಆಯುಕ್ತರ ಮೂಲಕ ಸಂಬಂಧಿಸಿದ ಪೊಲೀಸ್ ಠಾಣೆಗಳಿಗೆ ರವಾಣಿಸಿ, ಸಾಲಗಾರರಿಗೆ ಕಿರುಕುಳ, ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು.
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ನಿಯಂತ್ರಣ ಕುರಿತ ಸುಗ್ರೀವಾಜ್ಞೆಯನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು. ಮತ್ತು ಮೈಕ್ರೋ ಫೈನಾನ್ಸ್ ದಾರರು, ಲೇವಾದೇವಿಗಾರರು, ಪಾನ್‍ಬ್ರೋಕರ್‍ಗಳ ಸಭೆ ಕರೆದು ಮತ್ತೊಮ್ಮೆ ತಿಳುವಳಿಕೆ ನೀಡಲಾಗುವುದು. ಸಾರ್ವಜನಿಕರಲ್ಲಿ ಸುಗ್ರೀವಾಜ್ಞೆ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮುಖ್ಯಮಂತ್ರಿಗಳಿಗೆ ತಿಳಿಸಿದರು.
ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರು ಮಾತನಾಡಿ, ಅವಳಿನಗರದಲ್ಲಿ ಸಾಲಗಾರರಿಗೆ ಕಿರುಕುಳ ಆಗದಂತೆ ಮತ್ತು ಮೈಕ್ರೋ ಫೈನಾನ್ಸ್‍ದವರು ನಿಯಮ ಮೀರಿ ವರ್ತಿಸದಂತೆ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸಭೆಗಳನ್ನು ಜರುಗಿಸಿ, ಅವರಿಗೆ ತಿಳುವಳಿಕೆ ನೀಡಲಾಗಿದೆ. ಮತ್ತು ನಿಯಮ ಮೀರಿ ವರ್ತಿಸಿದ್ದ ಪ್ರಕರಣ ಒಂದರಲ್ಲಿ ಮೈಕ್ರೋ ಫೈನಾನ್ಸ್ ವಿರುದ್ಧ ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಮುಖ್ಯಮಂತ್ರಿಗಳಿಗೆ ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾವಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಡಿಆರ್‍ಸಿ ರಮೇಶ ಬಗಲಿ, ಲೀಡ್ ಬ್ಯಾಂಕ್ ಮ್ಯಾನೇಜರ ಪ್ರಭುದೇವ ಎನ್.ಜಿ. ಹಾಗೂ ಆರ್‍ಬಿಐ ಬ್ಯಾಂಕ್ ಪ್ರತಿನಿಧಿ ಸೇರಿದಂತೆ ಇತರರು ಉಪಸ್ಥಿತರಿದ್ದರು.