ಬೆಂಗಳೂರು : ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಮೇಲೆ ದಾಳಿ ನಡೆಸಿ ಗಲಭೆ ಸೃಷ್ಟಿಸಿರುವ ಈ ಘಟನೆ ಹಿಂದೆ ನಿಷೇಧಿತ ಸಂಘಟನೆಗಳು ಹಾಗೂ ಮತೀಯ ಮೂಲಭೂತವಾದಿಗಳ ಕೈವಾಡವಿರುವ ಬಲವಾದ ಸಂಶಯವಿದೆ. ಸ್ಥಳೀಯ ಪೊಲೀಸರು ಪ್ರಕರಣವನ್ನು ಭೇದಿಸುವುದು ಕಷ್ಟವಾದ ಕಾರಣ ಎನ್‌ಐಎ ತನಿಖೆಗೆ ಒಪ್ಪಿಸುವುದು ಸೂಕ್ತ ಎಂದು ಸರಕಾರಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
ಈ ಕುರಿತು ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಷ್ಟು ಮುಸ್ಲಿಮರು ಪೆಟ್ರೋಲ್ ಬಾಂಬ್ ಎಲ್ಲಿಂದ ತಂದಿದ್ದಾರೆ? ಅದು ಮಸೀದಿಗಳಿಂದ ಬಂದಿದೆಯೇ ಎಂಬುದೂ ಸೇರಿದಂತೆ ಎಲ್ಲಾ ಸಂಗತಿಗಳನ್ನು ತನಿಖೆ ಮಾಡಬೇಕಿದೆ. ಇದಕ್ಕಾಗಿ ಈ ಎಲ್ಲಾ ಪ್ರಕರಣಗಳನ್ನು ಎನ್‌ಐಎಗೆ ವಹಿಸಬೇಕು. ನಾಗಮಂಗಲದ ಕೋಮುಗಲಭೆ ಪ್ರಕರಣದಲ್ಲಿ ಮೊದಲು ಹಿಂದೂಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಇದು ಕಾಂಗ್ರೆಸ್‌ನ ತುಷ್ಟೀಕರಣ ರಾಜಕಾರಣಕ್ಕೆ ಸಾಕ್ಷಿ. ಇದೇ ರೀತಿ ಮಂಗಳೂರಿನಲ್ಲೂ ಆಗಿದೆ ಎಂದರು.
ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ದೇಶ ವಿರೋಧಿ ಶಕ್ತಿಗಳ ಜೊತೆ ಟೀ ಪಾರ್ಟಿ ಮಾಡುತ್ತಿದ್ದಾರೆ. ದೇಶ ವಿಭಜನೆ ಮಾಡಿದ ಕಾಂಗ್ರೆಸ್, ಈಗ ಮತ್ತೆ ದೇಶ ವಿರೋಧಿ ಶಕ್ತಿಗಳು ತಲೆ ಎತ್ತಲು ಸಹಕಾರ ನೀಡುತ್ತಿದೆ. ಪ್ರಗತಿಪರರ ಮುಖವಾಡ ಹಾಕಿಕೊಂಡ ಸಾಹಿತಿಗಳು ಹಾಗೂ ನಗರ ನಕ್ಸಲರು ಇದಕ್ಕೆ ಕುಮ್ಮಕ್ಕು ನೀಡಿದ್ದಾರೆ. ಇವರ‍್ಯಾರೂ ಈ ಘಟನೆಗಳನ್ನು ಖಂಡಿಸುತ್ತಿಲ್ಲ. ಪ್ರತಿ ದಿನ ಹಿಂದೂಗಳ ಮೇಲೆ ಹಲ್ಲೆಗಳು ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.