ಬೆಂಗಳೂರು : ಮೂರು ದಿನಗಳಲ್ಲಿ ಮೂರು ಪ್ರತ್ಯೇಕ ಜಿಲ್ಲೆಗಳಲ್ಲಿ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಪಕ್ಷ ನಾಯಕ ಆರ್ ಅಶೋಕ್ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಜ್ಯ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯವು ಕೂಡ ಬಿಹಾರ್ ರಾಜ್ಯದಂತೆ ದರೋಡೆಕೋರರ ರಾಜ್ಯವಾಗಿದೆ. ಬೀದರ್ ನಲ್ಲಿ ಹಾಡು ಹಗಲೇ ದರೋಡೆ ನಡೆದಿದೆ. ಇಲ್ಲಿ ದರೋಡೆ ಮಾಡಿ ವಿಮಾನ ರೈಲುಗಳಲ್ಲಿ ಹೋಗುತ್ತಿದ್ದಾರೆ.ರಾಜ್ಯದಲ್ಲಿ ದರೋಡೆ ಕೋರರ ಜಾತ್ರೆ ನಡೆಯುತ್ತಿದೆ. ಪೊಲೀಸರು ಬಿಟ್ ನಲ್ಲಿ ಇದ್ದರೂ ಕೂಡ ಯಾರನ್ನು ಬಂಧಿಸಿಲ್ಲ. ಟೋಲ್ ಗಳಲ್ಲಿ ಏನು ಆಗಿದೆ ಅಂತ ಸ್ವತಃ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಪೊಲೀಸರು ರಾಜ್ಯದ ಗೌರವವನ್ನು ಮಣ್ಣು ಪಾಲು ಮಾಡಿದ್ದಾರೆ. ಎಷ್ಟಾದರೂ ಕೂಡ ಸಿಎಂ
ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳ ಸಭೆ ಮಾಡಿಲ್ಲ. ಇನ್ಮುಂದೆ ಯಾದರೂ ಕುರ್ಚಿ ಜಗಳ ಬಿಟ್ಟು ಕೆಲಸ ಮಾಡಬೇಕು ಎಂದು ತಿಳಿಸಿದರು.ಎಲ್ಲಾ ಭಿನ್ನರು ಮೀಟಿಂಗ್ ನಡೆಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಎಲ್ಲರನ್ನೂ ಪ್ರತಿನಿಧಿಸುವ ಸಿಎಂ ಸಿದ್ದರಾಮಯ್ಯ ಮತ್ತು ಸಚಿವರು ಬೇಕು. ಎಲ್ಲರು ಡಿನ್ನರ್ ಮೀಟಿಂಗ್ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದರು.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಇಡಿ ಅಧಿಕಾರಿಗಳು 300 ಕೋಟಿ ರೂಪಾಯಿನಷ್ಟು ಆಸ್ತಿ ಜಪ್ತಿ ಮಾಡಿದ್ದಾರೆ. ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಎರಡು ತಿಂಗಳಿನಿಂದ ಪತ್ರ ಬರೆದಿದ್ದೇನೆ. ಆದರೂ ಕೂಡ ಯಾವುದೇ ಉತ್ತರ ನೀಡಿಲ್ಲ. ಲೋಕಾಯುಕ್ತ ಅಧಿಕಾರಿಗಳಿಗೆ ತನಿಖೆ ಮಾಡಲು ಇಷ್ಟ ಇಲ್ಲ ಅನಿಸುತ್ತದೆ. ಇಡಿ ಅಧಿಕಾರಿಗಳು ತನಿಖೆ ಮಾಡಿ ವರದಿ ನೀಡಿದರು ಸಹ ನೋಡಿಲ್ಲ. ಲೋಕಾಯುಕ್ತರಿಗೆ ತನಿಖೆ ಮಾಡುವ ಮನಸ್ಸು ಇಲ್ಲ. ಲೋಕಾಯುಕ್ತ ಅಧಿಕಾರಿಗಳಿಗೆ ಒತ್ತಡ ಇದೆ. ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಒತ್ತಾಯ ಮಾಡುತ್ತೇನೆ ಎಂದು ವಿಧಾನಸೌಧದಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿಕೆ ನೀಡಿದರು.