ಮಂಡ್ಯ : ನಿನ್ನೆ ತಾನೆ ಚಿತ್ರದುರ್ಗದಲ್ಲಿ 82 ವರ್ಷದ ವೃದ್ಧನನ್ನು ಆಸ್ತಿ ವಿವಾದ ಹಿನ್ನೆಲೆಯಲ್ಲಿ ಸ್ವಂತ ಮಕ್ಕಳೇ ಮನೆಯಿಂದ ಹೊರಹಾಕಿರುವ ಅಮಾನವೀಯ ಘಟನೆ ನಡೆದಿತ್ತು. ಈ ಒಂದು ಘಟನೆ ಮಾಸುವ ಮುನ್ನವೇ ಇದೀಗ ಮಂಡ್ಯದಲ್ಲಿ ಮತ್ತೊಂದು ಮನಕಲಕುವ ಘಟನೆ ನಡೆದಿದ್ದು ಮಗನೊಬ್ಬ ತನ್ನ ಮಾನಸಿಕ ಅಸ್ವಸ್ಥಳಾದ ಹೆತ್ತ ತಾಯಿಯನ್ನೆ ಬೀದಿಗೆ ಬಿಟ್ಟು ಹೋಗಿರುವ ಘಟನೆ ನಡೆದಿದೆ.
ಹೌದು ಮಾನಸಿಕ ಅಸ್ವಸ್ಥ ತಾಯಿಯನ್ನು ಮಗ ಬಿಟ್ಟು ರಸ್ತೆಯಲ್ಲಿ ಹೋಗಿರುವ ಮನಕಲಕುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ನಡೆದಿದೆ. ವೃದ್ಧೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‘ಬರುತ್ತೇನೆ, ಇಲ್ಲೇ ಇರು’ ಎಂದು ರಸ್ತೆಯಲ್ಲಿ ತಾಯಿಯನ್ನು ಬಿಟ್ಟು ಮಗ ಹೋಗಿದ್ದ ಎನ್ನಲಾಗಿದೆ.
ಮಗನ ಬರುವಿಕೆಗಾಗಿ ಕಾಯುತ್ತಿದ್ದ ತಾಯಿ, ‘ನನ್ನ ಮಗ ಬಂದು ಕರೆದುಕೊಂಡು ಹೋಗುತ್ತಾನೆ’ ಎನ್ನುತ್ತಿದ್ದರು. ಸುಮಾರು 70 ರಿಂದ 80 ವರ್ಷದ ವೃದ್ಧೆಗೆ ಸ್ಥಳೀಯರು ಆಹಾರ ನೀಡಿ ರಕ್ಷಿಸಿದ್ದಾರೆ. ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವೃದ್ಧೆಯನ್ನು ರಕ್ಷಿಸಿ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದೆ. ಚಿಕ್ಕವರಿದ್ದಾಗ ಸಾಕಿ ಸಲುಹಿ ದೊಡ್ಡವರನ್ನಾಗಿ ಮಾಡಿದ ಹೆತ್ತವರೇ ಬೇಡವಾದ ಮೇಲೆ ಇಂತಹ ಮಕ್ಕಳು ಸಮಾಜಕ್ಕೆ ಕಳಂಕ.