ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಬಾಕಿ ಆಸ್ತಿ ತೆರಿಗೆ ಪಾವತಿಸದ ಸುಮಾರು 3.75 ಲಕ್ಷ ಸುಸ್ತಿದಾರಿಗೆ ನೋಟಿಸ್ ಜಾರಿ ಮಾಡಿ ಬಾಕಿ ತೆರಿಗೆ ವಸೂಲಿ ಮಾಡಲಾಗುವುದೆಂದು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪಾಲಿಕೆ ಕೇಂದ್ರ ಕಛೇರಿಯ ಆಯುಕ್ತರ ಕಛೇರಿಯಲ್ಲಿ ಇಂದು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಆಸ್ತಿ ತೆರಿಗೆ ಸಂಗ್ರಹಿಸಲು ಹೆಚ್ಚು ಆದ್ಯೆತೆ ನೀಡುತ್ತಿದ್ದು, ಇನ್ನೂ ಪರಿಣಾಮಕಾರಿಯಾಗಿ ಆಸ್ತಿ ತೆರಿಗೆ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ 3.75 ಲಕ್ಷ ಸುಸ್ತಿದಾರರು ಸುಮಾರು 700 ರಿಂದ 800 ಕೋಟಿ ರೂ. ಪಾಲಿಕೆಗೆ ಬಾಕಿ ಆಸ್ತಿ ತೆರಿಗೆ ಪಾವತಿಸಬೇಕಿದ್ದು, ಈ ನಿಟ್ಟಿನಲ್ಲಿ ಎಸ್.ಎಂ.ಎಸ್ ಹಾಗೂ ಇಮೇಲ್ ಮೂಲಕ ನೋಟೀಸ್ ಜಾರಿ ಮಾಡಲಾಗುವುದು. ಈಗಾಗಲೇ ಪಾವತಿಸಿದ್ದಲ್ಲಿ ಯಾವುದೇ ಸಮಸ್ಯೆ ಇಲ್ಲ. ಪಾವತಿಸಬೇಕಿದ್ದಲ್ಲಿ ಕೂಡಲೆ ಬಾಕಿ ಆಸ್ತಿ ತೆರಿಗೆ ಪಾವತಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದಲ್ಲಿ ಹೊಸ ಖಾತಾಗಾಗಿ 50 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಪಾಲಿಕೆಗೆ ಸಲ್ಲಿಕೆಯಾಗಿವೆ. ಅವುಗಳನ್ನು ಆದ್ಯತೆ ಮೇರೆಗೆ ಮಾಡಬೇಕು. ಇದರಿಂದ ಪಾಲಿಕೆಗೆ ಹೆಚ್ಚು ಆಸ್ತಿ ತೆರಿಗೆ ಸಂಹ್ರಹಿಸಲು ಸಹಕಾರಿಯಾಗಲಿದ್ದು, ಅದಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಎ-ಖಾತಾಗೆ ಶೀಘ್ರ ಆನ್ ಲೈನ್ ವ್ಯವಸ್ಥೆ:
ಬಿಬಿಎಂಪಿ ವ್ಯಾಪ್ತಿಯಲ್ಲಿ ಎ-ಖಾತಾಗಳನ್ನು ನೀಡುವ ಸಲುವಾಗಿ ಕರ್ನಾಟಕ ಸರ್ಕಾರವು ಆದೇಶದ ಹೊರಡಿಸಿದೆ. ಅದರಂತೆ, ನಾಗರಿಕರು ಎ-ಖಾತಾಗೆ ಅರ್ಜಿ ಸಲ್ಲಿಸುವ ಸಲುವಾಗಿ ಶೀಘ್ರ ಆನ್‌ಲೈನ್ ವ್ಯವಸ್ಥೆ ಜಾರಿಗೊಳಿಸಲು ಸೂಚನೆ ನೀಡಿದರು.
ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಿ:
ನಗರದಲ್ಲಿ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಆದ್ಯತೆಯ ಮೇಲೆ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ವಾರ್ಡ್ ರಸ್ತೆಗಳಲ್ಲಿಯೂ ರಸ್ತೆ ಗುಂಡಿಗಳನ್ನು ಮುಚ್ಚಲು ಸೂಕ್ತ ಕ್ರಮ ಕೈಗೊಂಡು ತ್ವರಿತಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಮಳೆಗಾಲದ ವೇಳೆ ಕೋಲ್ಡ್ ಮಿಕ್ಸ್ ಹಾಗೂ ಇಕೋಫಿಕ್ಸ್ ಅನ್ನು ಬಳಸಿಕೊಂಡು ರಸ್ತೆ ಗುಂಡಿಗಳನ್ನು ಮುಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಸ್ತೆ ಬದಿ ಡ್ರೈನ್‌ಗಳ ಸ್ವಚ್ಛತೆ ಮಾಡಿ:
ಮಳೆಗಾಲದ ವೇಳೆ ಯಾವುದೇ ರಸ್ತೆಗಳಲ್ಲಿ ಜಲಾವೃತವಾಗದಂತೆ ನೋಡಿಕೊಳ್ಳಬೇಕು. ಶಿಲ್ಟ್ ಅಂಡ್ ಟ್ರ್ಯಾಕ್ಟರ್ ಗಳ ಮೂಲಕ ರಸ್ತೆ ಬದಿಯ ಶೋಲ್ಡರ್ ಡ್ರೈನ್ ಗಳು, ಗ್ರೇಟಿಂಗ್‌ಗಳ ಬಳಿ ಸ್ವಚ್ಛತೆ ಮಾಡಿ ರಸ್ತೆ ಮೇಲೆ ಬೀಳುವ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ:
ನಗರದಲ್ಲಿ ಡೆಂಗ್ಯೂ ಪ್ರಕರಣಗಳನ್ನು ನಿಯಂತ್ರಿಸಬೇಕು. ಕಳೆದ ಒಂದು ವಾರದಲ್ಲಿ 69 ಪ್ರಕರಣಗಳು ಪತ್ತೆಯಾಗಿದ್ದು, ಜುಲೈ ತಿಂಗಳಲ್ಲಿ 442 ಪ್ರಕರಣಗಳು ಪತ್ತೆಯಾಗಿವೆ. 2025ನೇ ಜನವರಿಯಿಂದ ಇಲ್ಲಿಯವರೆಗೆ 1,685 ಪ್ರಕರಣಗಳು ಪತ್ತೆಯಾಗಿದೆ. ಈ ಸಂಬಂಧ ಲಾರ್ವಾ ಉತ್ಪತ್ತಿ ಆಗುವ ತಾಣಗಳನ್ನು ಗುರುತಿಸಿ ಔಷಧಿ ಸಿಂಪರಣೆ ಮಾಡಿ ನಿರ್ಮೂಲನೆ ಮಾಡಬೇಕು. ಜೊತೆಗೆ ಡೆಂಗ್ಯೂ ಕುರಿತು ನಾಗರಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸ್ವಯಂಸೇವಕರನ್ನು ನಿಯೋಜಿಸಿಕೊಂಡು, ಮನೆ-ಮನೆಗೆ ಭೇಟಿ ನೀಡಿ ಅರಿವು ಮೂಡಿಸುವ ಕೆಲಸ ಮಾಡಬೇಕು.
ಸೊಳ್ಳೆಗಳನ್ನು ನಿಯಂತ್ರಿಸುವ ಸಲುವಾಗಿ ಪ್ರತಿ ಮನೆಗೆ ಓವಿ ಟ್ರ್ಯಾಪ್‌ಗಳನ್ನು ಅಳವಡಿಸಿಕೊಳ್ಳಲು ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಹೆಚ್ಚು ಪ್ರಕರಣಗಳು ಕಂಡುಬರುವ ಕಡೆ ಸಮೀಕ್ಷೆ ನಡೆಸಿ ಸೊಳ್ಳೆಗಳ ನಿರ್ಮೂಲನೆ ಮಾಡಬೇಕು. ನಿರಂತರವಾಗಿ ಫಾಗಿಂಗ್ ಮತ್ತು ಔಷಧ ಸಿಂಪಡಣೆ ಕಾರ್ಯ ನಡೆಸಲು ಸೂಚಿಸಿದರು. ಇದೇ ವೇಳೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಜೊತೆ ಸಮನ್ವಯ ಮಾಡಿಕೊಂಡು ಐ.ಇ.ಸಿ ಚಟುವಟಿಕೆಗನ್ನು ನಡೆಸುವ ಮೂಲಕ ಡೆಂಗ್ಯೂ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ತಿಳಿಸಿದರು.
ಸಹಾಯ ದೂರುಗಳಿಗೆ ಸ್ಪಂದಿಸಿ:
ನಗರದಲ್ಲಿ ವಿವಿಧ ಸಮಸ್ಯೆಗಳ ಇತ್ಯರ್ಥಪಡಿಸುವ ಸಲುವಾಗಿ ಸಹಾಯ 2.0 ತಂತ್ರಾಂಶದಲ್ಲಿ ದೂರಗಳು ಬರುತ್ತವೆ. ಅವುಗಳನ್ನು ಕಾಲಮಿತಿಯೊಳಗಾಗಿ ಬಗೆಹರಿಸಲು ಕ್ರಮ ಕೈಗೊಳ್ಳಲು ಸೂಚಿಸಿದರು.
ಅಪಾಯ ಸ್ಥಿತಿಯಲ್ಲಿರುವ ಮರ/ಕೊಂಬೆಗಳನ್ನು ತೆರವುಗೊಳಿಸಿ:
ನಗರದಲ್ಲಿ ಅಪಾಯ ಸ್ಥಿತಿಯಲ್ಲಿರುವ ಮರ/ಕೊಂಬೆಗಳನ್ನು ತೆರವುಗೊಳಿಸಿ. ಸಹಾಯ ತಂತ್ರಾಂಶದಲ್ಲಿ ಮರದ ಕೊಂಬೆಗಳನ್ನು ಕಟಾವು ಮಾಡಲು ಬಂದಿರುವ ದೂರುಗಳಿಗೆ ಕೂಡಲೇ ಸ್ಪಂದಿಸಿ ಕೊಂಬೆಗಳನ್ನು ಕಟಾವು ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಕರೀಗೌಡ, ಡಾ: ಕೆ ಹರೀಶ್ ಕುಮಾರ್, ಸುರಳ್ಕರ್ ವಿಕಾಸ್ ಕಿಶೋರ್, ಪ್ರಿತಿ ಗೆಹ್ಲೋಟ್, ಎಲ್ಲಾ ವಲಯ ಆಯುಕ್ತರು, ಎಲ್ಲಾ ಮುಖ್ಯ ಅಭಿಯಂತರರು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.