ಬೆಂಗಳೂರು : ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದು ವೈರಲ್ ಆಗಿತ್ತು. ಬಳಿಕ ಎಚ್ಚತ್ತ ರಾಜ್ಯ ಸರ್ಕಾರ ರಾಜ್ಯಾದ್ಯಂತ ಮೊಟ್ಟೆ ಸ್ಯಾಂಪಲ್ ಸಂಗ್ರಹಕ್ಕೆ ಇದೀಗ ಮುಂದಾಗಿದ್ದು ಈ ವಿಚಾರವಾಗಿ ಆರೋಗ್ಯ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶದ ವರದಿಯ ಕುರಿತು ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಮೊನ್ನೆ ಕಂಪನಿಯೊಂದರ ಮೊಟ್ಟೆಯ ಉಪಯೋಗ ಮಾಡಬಾರದು ಅಂತ ವಿಡಿಯೋವೊಂದು ವೈರಲ್ ಆಗಿತ್ತು. ಕಂಪನಿಯ ಮೊಟ್ಟೆಯಲ್ಲಿ ಉಪಯೋಗ ಮಾಡಬಾರದು, ಆ್ಯಂಟಿ ಬಯೋಟೆಕ್ ಅಂಶ ಇದೆ ಎಂಬ ಬಗ್ಗೆ ಮಾಹಿತಿ ಬಂದಿತ್ತು. ಇದರ ಕುರಿತಂತೆ ಸ್ಪಷ್ಟವಾದ ವಿಚಾರ ತಿಳಿದುಕೊಳ್ಳಲು ನಮ್ಮ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಹೇಳಿದರು.
ಕಳೆದ ಸೆಪ್ಟೆಂಬರ್ – ಅಕ್ಟೋಬರ್ ತಿಂಗಳಿನಲ್ಲಿ 125 ಮೊಟ್ಟೆಯ ಸ್ಯಾಂಪಲ್ ಟೆಸ್ಟ್ ಮಾಡಿದ್ದೇವೆ. ಅದರಲ್ಲಿ 123 ಮೊಟ್ಟೆಯ ಸ್ಯಾಂಪಲ್ ಗುಣಮಟ್ಟ ಸರಿಯಿದೆ. ಒಂದು, ಎರಡು ಮೊಟ್ಟೆಯ ಸ್ಯಾಂಪಲ್ ಮಾತ್ರ ಸರಿಯಿಲ್ಲ ಎಂದು ಬಂದಿತ್ತು. ಇದರಿಂದ ಯಾವುದೋ ಸುದ್ದಿ ಕೇಳಿ ಆತಂಕ, ಭಯಕ್ಕೆ ಒಳಗಾಗುವುದು ಬೇಡ ಎಂದು ಸಚಿವರು ಮನವಿ ಮಾಡಿದರು.
ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದಕ್ಕಾಗಿ ಗೊಂದಲ ಇದ್ದರೆ, ನಾವು ತಿಳಿದುಕೊಳ್ಳಬೇಕಾಗುತ್ತದೆ. ನಮ್ಮ ಇಲಾಖೆಗೆ ಹೇಳಿದ್ದೇನೆ. ಈಗಾಗಲೇ ಕಂಪನಿಯ ಮೊಟ್ಟೆ ಸ್ಯಾಂಪಲ್ ಪಡೆಯಲಾಗಿದೆ. ಟೆಸ್ಟ್ ಮಾಡಿದ ನಂತರ ಈ ವಿಚಾರವನ್ನು ತಮ್ಮ ಮುಂದೆ ಇಡುವೆ. ಸದ್ಯಕ್ಕೆ ಇದರ ಬಗ್ಗೆ ಆತಂಕ ಪಡುವುದು ಬೇಡ ಎಂದು ತಿಳಿಸಿದರು.








