ಬೆಂಗಳೂರು : ನೋ ರೀ ಶಫಲ್. ಯಾವುದೇ ಶಫಲ್ ಇಲ್ಲ. ನಾನೇ ಚೀಫ್ ಮಿನಿಸ್ಟರ್ ಹೇಳುತ್ತಿದ್ದೇನೆ. ನಿಮಗೆ ಚೀಫ್ ಮಿನಿಸ್ಟರ್ ಮೇಲೆ ನಂಬಿಕೆ ಇಲ್ವಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಅನೌಪಚಾರಿಕವಾಗಿ ಮಾತನಾಡಿದ ಅವರು, ಎಐಸಿಸಿ ವರಿಷ್ಠರ ಜೊತೆ ಸಭೆ ರೀ ಶಫಲ್ ಬಗ್ಗೆ ಏನಾದರು ಚರ್ಚೆ ಆಗೆದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಮೇಲಿನಂತೆ ಉತ್ತರಿಸಿದರು.
ರಾಜ್ಯದ 12 ಕ್ರೀಡಾಪಟುಗಳಿಗೆ ಆಫರ್ ಲೆಟರ್ ನೀಡಿದ ಸಿಎಂ
ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯನವರು ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್, ಏಷಿಯನ್ ಗೇಮ್ಸ್, ಪ್ಯಾರಾ ಏಷಿಯನ್ ಗೇಮ್ಸ್ ಹಾಗೂ ಕಾಮನ್‍ವೆಲ್ತ್ ಗೇಮ್ಸ್ಗಳಲ್ಲಿ ಪದಕ ಗೆದ್ದಿದ್ದ ರಾಜ್ಯದ 12 ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗದ ಆಫರ್ ಲೆಟರ್ ನೀಡಿದ್ದಾರೆ.
ಕ್ರೀಡಾಪಟುಗಳಿಗೆ ಆಫರ್ ಲೆಟರ್ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ‘ವಿವಿಧ ಕ್ರೀಡಾಕೂಟಗಳಲ್ಲಿ ಪದಕ ಪಡೆದವರಿಗೆ ರಾಜ್ಯ ಸರ್ಕಾರ ನೆರವಾಗಲಿದೆ. ಅದರಂತೆ ರಾಜ್ಯದ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ನೀಡಲು ತೀರ್ಮಾನಿಸಿದ್ದೇವೆ. ಸುಮಾರು 12 ಜನರಿಗೆ ಅವಕಾಶ ಪತ್ರ ನೇರ ನೇಮಕಾತಿಗೆ ನೀಡುತ್ತಿದ್ದೇವೆ. 2016-17 ಒಲಂಪಿಕ್ಸ್ ಅಸೋಸಿಯೇಷನ್ ಏರ್ಪಾಡು ಮಾಡಿದ್ದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದೆ. ಆ ವೇಳೆ ರಾಜ್ಯದ ಕ್ರೀಡಾ ಸಾಧಕರಿಗೆ, ಪದಕ ಪಡೆದವರಿಗೆ ಸರ್ಕಾರದಲ್ಲಿ ಆದ್ಯತೆ ಮೇಲೆ ಕೆಲಸ ನೀಡುವುದಾಗಿ ಘೋಷಣೆ ಮಾಡಿದ್ದೆ.
ಆದರೆ ನಂತರ ಬಂದ ಸರ್ಕಾರ ಅದನ್ನ ಜಾರಿ ಮಾಡುವ ಪ್ರಯತ್ನ ಮಾಡಲಿಲ್ಲ. ನಾನು ಮತ್ತೆ ಅಧಿಕಾರಕ್ಕೆ ಬಂದ್ಮೇಲೆ ಈಗ ಜಾರಿ ಮಾಡಿದ್ದೇನೆ. ಈ ಹಿಂದಿನ ಬೊಮ್ಮಾಯಿ ಸರ್ಕಾರ ಕ್ರೀಡಾ ಸಾಧಕರಿಗೆ ಪೊಲೀಸ್ ಇಲಾಖೆಯಲ್ಲಿ ಶೇ. 2 ರಷ್ಟು ಮೀಸಲಾತಿ ನೀಡಿತ್ತು. ನಾನು ಬಂದ್ಮೇಲೆ ಪೋಲಿಸ್ ಹಾಗೂ ಅರಣ್ಯ ಇಲಾಖೆಯಲ್ಲಿ ಶೇ. 3 ರಷ್ಟು ಮೀಸಲಾತಿ ಹೆಚ್ಚಿಸಿದ್ದೇನೆ. ಅಲ್ಲದೆ ಪದವಿ ಪಡೆದವರಿಗೆ ಗ್ರೂಪ್-ಸಿ ಉದ್ಯೋಗ ನೀಡಲು ತೀರ್ಮಾನ ಮಾಡಿದ್ದೇವೆ ಎಂದರು.