ಬೆಂಗಳೂರು: ವಿಚಾರಣಾಧೀನ ಕೈದಿ ವಿರುದ್ಧ ಹಲವು ಪ್ರಕರಣಗಳಿದ್ದರೆ ಜಾಮೀನು ನೀಡಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ವಿಚಾರಣಾಧೀನ ಕೈದಿಯು ಒಟ್ಟು ಶಿಕ್ಷೆಯ ಪೈಕಿ ಮೂರನೇ ಒಂದರಷ್ಟು ಕಳೆದಿದ್ದರೆ ಜಾಮಿನಿಗೆ ಅರ್ಹ ಎನ್ನುವ ಬಿಎನ್ಎಸ್ಎಸ್ ಸೆಕ್ಷನ್ 479 ಅನ್ವಯವಾಗುವುದಿಲ್ಲ. ವಿಚಾರಣಾಧೀನ ಕೈದಿಯ ವಿರುದ್ಧದ ಅಪರಾಧ ಪ್ರಕರಣಕ್ಕೆ ನಿಗದಿಯಾಗಿರುವ ಒಟ್ಟು ಶಿಕ್ಷೆಯ ಪ್ರಮಾಣದಲ್ಲಿ ಮೂರನೇ ಒಂದು ಭಾಗದ ದಿನಗಳನ್ನು ಕೈದಿಯು ಜೈಲಿನಲ್ಲಿ ಕಳೆದರೆ ಜಾಮೀನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಪ್ರತಿಪಾದಿಸುವ ನೂತನ ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ ಸೆಕ್ಷನ್ 479 ಹಲವು ಪ್ರಕರಣಗಳು ದಾಖಲಾಗಿದ್ದ ಸಂದರ್ಭದಲ್ಲಿ ಅನ್ವಯವಾಗುವುದಿಲ್ಲವೆಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಠೇವಣಿದಾರರಿಗೆ ವಂಚಿಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಅರ್ಜಿದಾರರು ಜಾಮೀನು ಕೋರಿ 2ನೇ ಬಾರಿಗೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಠೇವಣಿದಾರರಿಗೆ ವಂಚಿಸಿದ್ದ ಪ್ರಕರಣದಲ್ಲಿ 31 ತಿಂಗಳಿಂದ ಜೈಲಿನಲ್ಲಿರುವ ಕಾರಣಕ್ಕೆ ಈ ಸೆಕ್ಷನ್ ಆಧರಿಸಿ ಜಾಮಿನು ನೀಡುವಂತೆ ಕೋರಿ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮತ್ತು ಶ್ರೀ ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್ ಕೋಆಪರೇಟಿವ್ ಲಿಮಿಟೆಡ್ ಅಧ್ಯಕ್ಷ ಕೆ. ರಾಮಕೃಷ್ಣ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಅವರ ಪೀಠ ಮಹತ್ವದ ಆದೇಶ ಹೊರಡಿಸಿದೆ.