ಮೈಸೂರು : ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಅವರ ವಿರುದ್ಧ ಎನ್‌ಡಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿ ಸೋತಿದ್ದಾರೆ. ಈ ಒಂದು ವಿಚಾರವಾಗಿ ಕೇಂದ್ರದ ಮಾಜಿ ಸಚಿವ ಸಿಎಂ ಇಬ್ರಾಹಿಂ 150 ಕೋಟಿ ಖರ್ಚು ಮಾಡಿ ನಿಖಿಲ್ ಕುಮಾರಸ್ವಾಮಿ 25,000 ಮತಗಳ ಅಂತರದಿಂದ ಸೋತಿದ್ದಾರೆ ಎಂದು ತಿಳಿಸಿದರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಇನ್ನಾದರೂ ಬುದ್ಧಿ ಕಲಿಯಬೇಕು. ಕಳೆದ ಬಾರಿ ನಾನು ಕುಮಾರಸ್ವಾಮಿ ಜೊತೆಯಲ್ಲಿ ಇದ್ದಾಗ 4 ಕೋಟಿ ಖರ್ಚು ಮಾಡಿ 20 ಸಾವಿರ ಲೀಡ್ನಲ್ಲಿ ಗೆದ್ದರು. ಈಗ ನಾನು ಎಚ್ ಡಿ ಕುಮಾರಸ್ವಾಮಿ ಅವರ ಜೊತೆಗೆ ಇಲ್ಲ. ಈಗ 150 ಕೋಟಿ ಖರ್ಚು ಮಾಡಿ 25,000 ಮತಗಳಿಂದ ನಿಖಿಲ್ ಕುಮಾರಸ್ವಾಮಿ ಸೋತಿದ್ದಾರೆ ಎಂದು ಮೈಸೂರಿನಲ್ಲಿ ಸಿಎಂ ಇಬ್ರಾಹಿಂ ತಿಳಿಸಿದರು.
ಮುಸ್ಲಿಮರು ಇರದಿದ್ದರೆ ಜೆಡಿಎಸ್ ಗೆ ಒಂದು ಮತವು ಬರುತ್ತಿರಲಿಲ್ಲ. 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ 19 ಸ್ಥಾನಗಳನ್ನು ಗೆದ್ದಿದೆ. ಜೆಡಿಎಸ್ 19 ಸ್ಥಾನ ಗೆದ್ದಿದ್ದು ಮುಸ್ಲಿಮರಿಂದ ಎಂಬುದು ಸಾಬೀತಾಗಿದೆ. ಈಗ ನಾವು ಕಾಂಗ್ರೆಸ್ ಜೊತೆ ಹೋಗಲು ಇನ್ನೂ ನಿರ್ಧಾರ ಮಾಡಿಲ್ಲ. ನಾವು ತೃತೀಯ ರಂಗಸ್ಥಾಪನೆ ಬಗ್ಗೆ ಮನಸ್ಸು ಮಾಡುತ್ತಿದ್ದೇವೆ ಅಷ್ಟೇ ಎಂದು ತಿಳಿಸಿದರು.
ಶಾಸಕ ಜಿಟಿ ದೇವೇಗೌಡ ನಮ್ಮ ಜೊತೆಗೆ ಬಂದರೆ ಮತ್ತಷ್ಟು ಶಕ್ತಿ ಬರುತ್ತದೆ. ಜಿ ಟಿ ದೇವೇಗೌಡ ಜೊತೆಗೆ ಈಗಾಗಲೇ ಎರಡು ಬಾರಿ ನಾನು ಮಾತನಾಡಿದ್ದೇನೆ. ಶಾಸಕ ಜಿಟಿ ದೇವೇಗೌಡರಿಗೆ ಅವರದ್ದೇ ಆದಂತಹ ಬೆಂಬಲಿಗರ ಪಡೆಯಿದೆ. ಜಿ ಟಿ ದೇವೇಗೌಡರನ್ನು ಎಚ್ ಡಿ ಕುಮಾರಸ್ವಾಮಿ ನಿರ್ಲಕ್ಷ್ಯ ಮಾಡಿದ್ದಾರೆ. ಈ ಹಿಂದೆ ಎಚ್‌ಡಿ ದೇವೇಗೌಡರನ್ನು ಜಿಟಿ ದೇವೇಗೌಡರ ಮನೆಗೆ ಕರೆದುಕೊಂಡು ಹೋಗಿದ್ದೆ. ಎಚ್ ಡಿ ದೇವೇಗೌಡರನ್ನು ಜಿ ಟಿ ದೇವೇಗೌಡರ ಮನೆಗೆ ಕರೆದುಕೊಂಡು ಬಂದು ಪಕ್ಷದಲ್ಲಿ ಉಳಿಸಿದ್ದೆ. ಜೆಡಿಎಸ್ ನಲ್ಲಿ ಜಿ ಟಿ ದೇವೇಗೌಡರಿಗೆ ಕೋರ್ ಕಮಿಟಿ ಸ್ಥಾನ ಕೊಟ್ಟಿದೆ.
ಈಗ ನಿರ್ಲಕ್ಷ ಮಾಡಿರುವುದಕ್ಕೆ ಜಿ ಟಿ ದೇವೇಗೌಡರಿಗೆ ಬೇಸರವಾಗಿರುವುದು ಸತ್ಯ ಈಗ ಅದೆಲ್ಲದರ ಬಗ್ಗೆ ಜಿಟಿ ದೇವೇಗೌಡರ ಜೊತೆಗೆ ಚರ್ಚೆ ಮಾಡುತ್ತೇನೆ. ಜೆಡಿಎಸ್ ಪಕ್ಷದಲ್ಲೂ ಕೂಡ 12 ರಿಂದ 13 ಶಾಸಕರು ಬೇಸರಗೊಂಡಿದ್ದಾರೆ. ಜಿಟಿ ದೇವೇಗೌಡರಂತೆ ಹಲವು ಶಾಸಕರು ನೋವು ನುಂಗಿದ್ದಾರೆ. ನಾನು ಈಗ ಅವರನ್ನೆಲ್ಲ ಒಗ್ಗೂಡಿಸುವ ಕೆಲಸ ಶುರು ಮಾಡಿದ್ದೇನೆ. ಮುಂದೆ ಏನೇನಾಗುತ್ತೆ ನೋಡೋಣ ಎಂದು ಅವರು ತಿಳಿಸಿದರು.
ನಾನು ಈಗಲೂ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ. ನಮ್ಮ ಶಾಸಕರನ್ನು ನಿವಾರಿಸುವ ಜವಾಬ್ದಾರಿ ನನ್ನದಾಗಿದೆ. ನಾವು ಜೆಡಿಎಸ್ ಹೆಸರಿನಲ್ಲಿ ಇರಬೇಕಾ ಎಂದು ಚರ್ಚಿಸುತ್ತೇವೆ. ತೃತೀಯ ರಂಗಕ್ಕೆ ಬೇರೆ ಹೆಸರು ಕೊಡಬೇಕಾ ಎಂದು ಚರ್ಚಿಸುತ್ತೇವೆ. ಈಗ ಇರುವ ಜೆಡಿಎಸ್ ಮನೆಗೆ ಬೆಂಕಿ ಬಿದ್ದಾಗಿದೆ. ಜೆಡಿಎಸ್ ಶಾಸಕರು ಅವರವರ ಕ್ಷೇತ್ರ ಕಾಪಾಡಿಕೊಳ್ಳಬೇಕಿದೆ. ಹೀಗಾಗಿ ಒಬ್ಬರೇ ತಮ್ಮ ಹೇಳಿಕೆ ನೀಡಲು ಆರಂಭಿಸಿದ್ದಾರೆ. ಎಚ್ ಡಿ ಕುಮಾರಸ್ವಾಮಿ ಈಗಲಾದರೂ ಬುದ್ಧಿ ಕಲಿಯಬೇಕು. ಜೆಡಿಎಸ್ ಪಕ್ಷ ಫ್ಯಾಮಿಲಿ ಕಂಪನಿ ಮಾಡುವುದನ್ನು ಬಿಡಬೇಕು. ಆಗ ಮಾತ್ರ ಜೆಡಿಎಸ್ ಮೂಲಕ ಅಸ್ತಿತ್ವ ಸಾಧ್ಯ ಎಂದು ತಿಳಿಸಿದರು.