ಮಂಗಳೂರು : ಬಿಜೆಪಿಯ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಎನ್ಐಎ ಅಧಿಕಾರಿಗಳು ಪ್ರಕರಣದ ಆರನೇ ಆರೋಪಿಯನ್ನು ದೆಹಲಿಯ ಏರ್ಪೋರ್ಟ್ ನಲ್ಲಿ ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೋಡಾಜೆ ನಿವಾಸಿ ಮಹಮ್ಮದ್ ಶರೀಫ್(55) ಎಂದು ತಿಳಿದುಬಂದಿದೆ.
ಬಂಧಿತ ಮಹಮ್ಮದ್ ಶರೀಫ್ ಪ್ರವೀಣ್ ಕೊಲೆಗೆ ಸಂಚು ರೂಪಿಸುತ್ತಿದ್ದ ತಂಡದಲ್ಲಿದ್ದ. ಜೊತೆಗೆ ನಿಷೇಧಿತ ಪಿಎಫ್ಐ ಸಂಘಟನೆಯ ಮುಖಂಡನಾಗಿದ್ದ. ಎರಡು ಬಾರಿ ಎನ್ಐಎ ಅಧಿಕಾರಿಗಳು ಶರೀಫ್ ಮನೆ ಮೇಲೆ ದಾಳಿ ಮಾಡಿದ್ದರು.ಅಲ್ಲದೇ ಈತನ ಪತ್ತೆಗಾಗಿ ಎನ್ಐಎ ಅಧಿಕಾರಿಗಳು 5 ಲಕ್ಷ ರೂ. ರಿವಾರ್ಡ್ ಕೂಡ ಘೋಷಿಸಿದ್ದರು.
ಈ ವರೆಗೆ 20 ಜನ ಅರೆಸ್ಟ್!
ಜುಲೈ 26, 2022 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ನಡೆದ ಒಂದು ಕೊಲೆ ರಾಜ್ಯದಲ್ಲಿ ಬೆಚ್ಚಿ ಬೀಳಿಸಿತ್ತು. ಹಿಂದು ಪರ ಹೋರಾಟಗಾಗರು ಸ್ವತಃ ಬಿಜೆಪಿ ವಿರುದ್ದ ರೊಚ್ಚಿಗೇಳುವಂತೆ ಆಗಿತ್ತು ಅವತ್ತಿನ ಸ್ಥಿತಿ. ಎನ್ಐಎ ಪ್ರವೀಣ್ ನೆಟ್ಟಾರು ಕೊಲೆ ಕೇಸ್ ತನಿಖೆ ನಡೆಸುತ್ತಿದ್ದು, 21 ಆರೋಪಿಗಳನ್ನು ಅರೆಸ್ಟ್ ಮಾಡಿ ಆರೋಪಿಗಳ ವಿರುದ್ದ ಚಾರ್ಶೀಟ್ ಸಲ್ಲಿಕೆ ಮಾಡಿತ್ತು. ಮಹಮ್ಮದ್ ಶರೀಫ್ ಸೇರಿದಂತೆ ಈವರೆಗೆ 20 ಜನರನ್ನು ಬಂಧಿಸಲಾಗಿದೆ.