ಗಂಗಾವತಿ : ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ನಡೆ ತೀವ್ರ ಕುತೂಹಲ ಮೂಡಿಸಿದ್ದು, ಡಿಸೆಂಬರ್ 25 ರಂದು ಹೊಸ ಪಕ್ಷ ಘೋಷಣೆಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಬಿಜೆಪಿಯಿಂದ ದೂರ ಉಳಿದಿರುವ ಜನಾರ್ದನ ರೆಡ್ಡಿ ಅವರು,ಮತ್ತೆ ಬಿಜೆಪಿಗೆ ಕರೆತರುವ ಪ್ರಯತ್ನ ವಿಫಲವಾಗಿದೆ ಎನ್ನಲಾಗಿದ್ದು, ಸಚಿವ ಶ್ರೀರಾಮುಲು ಅವರನ್ನು ಗೆಳೆಯ ಜನಾರ್ದನ ರೆಡ್ಡಿ ಮನವೊಲಿಸಿ ಪಕ್ಷಕ್ಕೆ ಕರೆತರುವಂತೆ ರಾಜ್ಯ ಬಿಜೆಪಿ ನಾಯಕರ ಪ್ರಯತ್ನವೂ ವಿಫಲವಾಗಿದ್ದು, ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗದೇ ಸ್ವಂತ ಪಕ್ಷ ಕಟ್ಟಿ ಚುನಾವಣೆ ಎದುರಿಸಲು ಜನಾರ್ದನ ರೆಡ್ಡಿ ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಜನಾರ್ದನ ರೆಡ್ಡಿ ತಮ್ಮ ಆಪ್ತರ ಮೂಲಕ ಹೊಸ ಪಕ್ಷ ನೋಂದಣಿ ಕಾರ್ಯದಲ್ಲಿ ತೊಡಗಿದ್ದರಂತೆ. ತಮ್ಮ ನೂತನ ಕರ್ನಾಟಕ ಪ್ರಗತಿ ಪಕ್ಷ ಎಂದು ಹೆಸರಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಜನಾರ್ದನ ರೆಡ್ಡಿ ಅವರ ಬೆಂಬಲಿಗರ ಹೆಸರಿನಲ್ಲಿ ‘ಕರ್ನಾಟಕ ರಾಜ್ಯ ಪ್ರಗತಿ ಪಕ್ಷ’ ಸ್ಥಾಪನೆಗೆ ಸಂಬಂಧಿಸಿದ ದಾಖಲೆ ಸಮೇತ ನೋಂದಣಿ ಪ್ರಕ್ರಿಯೆಗೆ ಸದ್ದಿಲ್ಲದೆ ಮುಂದುವರಿದಿರುವುದು ಕುತೂಹಲ ಕೆರಳಿಸುವಂತಾಗಿದೆ. ಗಂಗಾವತಿಯಿಂದ ತಾವೇ ಸ್ಪರ್ಧೆ ಮಾಡಿ, ಉತ್ತರ ಕರ್ನಾಟಕದ ಮೂವತ್ತಕ್ಕೂ ಅಧಿಕ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಚುನಾವಣೆ ಕಣಕ್ಕೆ ಇಳಿಸಲು ಜನಾರ್ದನರೆಡ್ಡಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.