ಬೆಂಗಳೂರು : ನೂತನ ನೀತಿಯಲ್ಲಿ ಜವಳಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಕಾರ್ಮಿಕರಿಗೆ ಹಾಗೂ ಕೈಮಗ್ಗ ನೇಕಾರರಿಗೆ 2ರಿಂದ 3 ಸಾವಿರ ಸಹಾಯಧನ ಸೇರಿದಂತೆ ಇನ್ನಿತರ ಅಂಶಗಳು ಒಳಗೊಂಡ ನೂತನ ಜವಳಿ ಹಾಗೂ ಸಿದ್ಧ ಉಡುಪು ನೀತಿಯನ್ನು ಪರಿಷ್ಕರಿಸಲಾಗಿದ್ದು, ಶೀಘ್ರದಲ್ಲಿ ಇದನ್ನು ಘೋಷಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದು ಜವಳಿ ಸಚಿವ ಶಿವಾನಂದ ಎಸ್. ಪಾಟೀಲ್ ತಿಳಿಸಿದರು.
ವಿಧಾನಪರಿಷತ್ನಲ್ಲಿ ಮಂಗಳವಾರ ಬಿಜೆಪಿ ಸದಸ್ಯ ಎಂ. ನಾಗರಾಜ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಹಿಂದಿನ ಮೂರು ಜವಳಿ ನೀತಿಗಳ ಸಾಧಕ-ಬಾಧಕಗಳ ಅಧ್ಯಯನ ಮಾಡಿ, ಎಲ್ಲರ ಸಲಹೆ ಸೂಚನೆಗಳನ್ನು ಪರಿಗಣಿಸಿ, 2025ರಿಂದ 2030ರ ವರೆಗೆ ಹೊಸ ಜವಳಿ ನೀತಿ ರೂಪಿಸಲಾಗಿದೆ. ಶೀಘ್ರದಲ್ಲಿ ಇದನ್ನು ಘೋಷಿಸಿ, ಕಾರ್ಯಾರೂಪಕ್ಕೆ ತರಲಾಗುವುದು ಎಂದರು.
2024-25ನೇ ಸಾಲಿನ ಬಜೆಟ್ನಲ್ಲಿ 2024ರಿಂದ 29ರ ಅವಧಿಯಲ್ಲಿ 10 ಸಾವಿರ ಕೋಟಿ ಬಂಡವಾಳ ಹೂಡಿ 2 ಲಕ್ಷ ಮಂದಿಗೆ ಉದ್ಯೋಗ ಸೃಷ್ಟಿಸುವುದಾಗಿ ತಿಳಿಸಲಾಗಿದೆ. ಇದಕ್ಕೆ ಪೂರಕವಾಗಿ ಹೊಸ ಜವಳಿ ನೀತಿಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ.ನೇಕಾರ ಸನ್ಮಾನ ಯೋಜನೆಯಡಿ ಕೊಡಲಾಗುತ್ತಿದ್ದ 2,500 ರೂ.ಗಳನ್ನು 5 ಸಾವಿರ ರೂ.ಗೆ ಏರಿಸಲಾಗಿದೆ. ಪರಿಷ್ಕೃತ ನೀತಿಯಲ್ಲಿ ಇನ್ನೂ ಹೆಚ್ಚಳ ಮಾಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.








