ಮೈಸೂರು : ವಿದ್ಯಾರ್ಥಿಗಳಿಗೆ ತಾಯಿಯೇ ಮೊದಲ ಗುರುವಾದರೆ, ಇನ್ನು ಶಿಕ್ಷಣ ನೀಡುವ ಶಿಕ್ಷಕ ಎರಡನೇ ಗುರು ಎಂದು ಹೇಳಲಾಗುತ್ತದೆ. ಆದರೆ ಇನ್ನೊಬ್ಬ ಶಿಕ್ಷಕ ತಾನು ಪಾಠ ಮಾಡಬೇಕಿದ್ದ ವಿದ್ಯಾರ್ಥಿನಿಗೆ ಪ್ರೇಮ ಪಾಠ ಹೇಳಿ ಹಾಗೆನೇ ಪ್ರೀತಿಸಿ ಮದುವೆಯಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ.
ಹೌದು ನಗರದ ಖಾಸಗಿ ಬಿಎಡ್ ಉಪನ್ಯಾಸಕರಾಗಿದ್ದ ತಾಲೂಕಿನ ಬೆಂಕಿಪುರ ನಿವಾಸಿ ಯಶೋಧ್ ಕುಮಾರ್ ಹಾಗೂ ನಗರಕ್ಕೆ ಸಮೀಪದ ಹಳೆಯೂರಿನ (ಚಿಕ್ಕಹುಣಸೂರು) ಸಜ್ಜೇಗೌಡರ ಪುತ್ರಿ ಪೂರ್ಣಿಮಾ ಮದುವೆ ಮಾಡಿಕೊಂಡಿದ್ದಾರೆ. ಅಲ್ಲದೆ ರಕ್ಷಣೆಗಾಗಿ ಪೊಲೀಸರ ಮೊರೆಗೆ ಹೋಗಿದ್ದಾರೆ.
ಮಗಳನ್ನು ಶಿಕ್ಷಕಿಯನ್ನಾಗಿಸಬೇಕೆಂಬ ಆಸೆಯಿಂದ ಬೀದಿ ಬದಿ ಸೊಪ್ಪು ವ್ಯಾಪಾರ ಮಾಡಿ, ಜೀವನ ನಡೆಸುತ್ತಿದ್ದ ಸಜ್ಜೇಗೌಡ, ಸಾಲ ಮಾಡಿ ಪೂರ್ಣಿಮಾಳನ್ನು ನಗರದ ಖಾಸಗಿ ಡಿಎಡ್ ಕಾಲೇಜಿಗೆ ದಾಖಲಿಸಿದ್ದರು. ಪೂರ್ಣಿಮಾ ಬಿಎಡ್ ಮುಗಿಸಿ ಮನೆಯಲ್ಲಿದ್ದಳು. ವ್ಯಾಸಂಗ ಮಾಡುತ್ತಿದ್ದಾಗಲೇ ಇಬ್ಬರೂ ಪ್ರೀತಿಸುತ್ತಿದ್ದರು. ಈ ಮಾಹಿತಿ ತಿಳಿದ ಪೋಷಕರು, ಮಗಳಿಗೆ ತಿಳಿಹೇಳಿ ಎಚ್ಚರಿಸಿದ್ದರಲ್ಲದೆ ವಿರೋಧ ವ್ಯಕ್ತಪಡಿಸಿದ್ದರು.
ಡಿ.26ರ ಗುರುವಾರ ಕಾಲೇಜಿನಿಂದ ಸರ್ಟಿಫಿಕೇಟ್ ತರುವುದಾಗಿ ಹೇಳಿ ಹೋದ ಪೂರ್ಣಿಮಾ, ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಳು, ಮಗಳು ಮನೆಗೆ ವಾಪಸ್ಸಾಗದಿದ್ದಾಗ ಅನುಮಾನಗೊಂಡು ಬಿಳಿಕೆರೆ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.ಇತ್ತ ಯಶೋಧ್ ಕುಮಾರ್ ಸಹ ಕಾಲೇಜು ತೊರೆದು ಬೇರೆಡೆ ಕೆಲಸಕ್ಕೆ ಸೇರಿದ್ದ. ಇದ್ಯಾವುದನ್ನೂ ಲೆಕ್ಕಿಸದೆ ಇಬ್ಬರು ಮನೆ ತೊರೆದು ಮದುವೆ ಮಾಡಿಕೊಂಡಿದ್ದಾರೆ.
ಈ ನಡುವೆ ರಕ್ಷಣೆಕೋರಿ ಬಿಳಿಕೆರೆ ಠಾಣೆಯಲ್ಲಿ ದೂರು ದಾಖಲಿಸಿದ ಪರಿಣಾಮ, ಎರಡೂ ಕುಟುಂಬಗಳನ್ನು ಕರೆಸಿ ಮಾತುಕತೆ ನಡೆಸಿದ ವೇಳೆ ನಾವಿಬ್ಬರೂ ಪ್ರೀತಿಸಿ ಮದುವೆಯಾಗಿದ್ದೇವೆ, ಒಟ್ಟಿಗೆ ಇರುತ್ತೇವೆಂದು ಪಟ್ಟು ಹಿಡಿದ ಪರಿಣಾಮ, ಪೊಲೀಸರು ಪೋಷಕರಿಗೆ ತಿಳುವಳಿಕೆ ನೀಡಿ. ವಿವಾಹ ನೋಂದಾಯಿಸಿಕೊಳ್ಳುವಂತೆ ಪ್ರೇಮಿಗಳಿಗೆ ಸೂಚಿಸಿ ಕಳುಹಿಸಿದ್ದಾರೆ.