ಮಂಗಳೂರು : ಚೀನಾ ಸೈಬರ್ ವಂಚಕರಿಗೆ ಜನಸಾಮಾನ್ಯರ ಬ್ಯಾಂಕ್ ಅಕೌಂಟ್ ಗಳ ಮಾಹಿತಿಗಳನ್ನು ನೀಡುತ್ತಿದ್ದ ಇಬ್ಬರು ಸೈಬರ್ ವಂಚಕರನ್ನು ಮಂಗಳೂರಲ್ಲಿ ಸೈಬರ್ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಡಿಜಿಪಿ ಪ್ರಣವ್ ಮೊಹಂತಿ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ರಾಜ್ಯ ಸೈಬರ್ ಕಮಾಂಡ್ ಯೂನಿಟ್ನಿಂದ ಇಬ್ಬರನ್ನು ಬಂಧಿಸಲಾಗಿದೆ.
ಬಂಧಿತ ವಂಚಕರು ಟ್ರೇಡಿಂಗ್ ಬಿಸಿನೆಸ್ ಹೆಸರಲ್ಲಿ ಬ್ಯಾಂಕ್ ಖಾತೆಗಳ ಮಾಹಿತಿ ಪಡೆಯುತ್ತಿದ್ದರು. ಬಳಿಕ ಸೈಬರ್ ವಂಚನೆಗೆ ಬ್ಯಾಂಕ್ ಖಾತೆಗಳ ವಿವರ ಬಳಕೆ ಮಾಡುತ್ತಿದ್ದರು. ನಿಖರ ಮಾಹಿತಿ ಮೇರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 4 ಮೊಬೈಲ್ ಫೋನ್‌ಗಳು, 18 ಬಿಟ್ ಕಾರ್ಡ್‌ಗಳು, 17 ಬ್ಯಾಂಕ್ ಪಾಸ್‌ಬುಕ್‌ಗಳು, 6 ಚೆಕ್ ಪುಸ್ತಕಗಳು, 1,479.31 USDT (ಕ್ರಿಪ್ಟೋಕರೆನ್ಸಿ) 1 ಕಾರನ್ನು ವಶಕ್ಕೆ ಪಡೆಯಲಾಗಿದೆ.
ಚೀನಾದ ಸೈಬರ್ ವಂಚಕರಿಗೆ ಕಡಿಮೆ ಬೆಲೆಗೆ ಕ್ರಿಪ್ಟೋಕರೆನ್ಸಿ ಬೇಕಾಗಿದ್ದರಿಂದ, ಬಂಧಿತ ಆರೋಪಿಗಳು ಭಾರತೀಯರಿಂದ ಕಡಿಮೆ ಬೆಲೆಗೆ ಕ್ರಿಪ್ಟೋಕರೆನ್ಸಿಯನ್ನು ಖರೀದಿ ಮಾಡುತ್ತಿದ್ದರು. ವಾಟ್ಸಾಪ್ ಮತ್ತು ಟೆಲಿಗ್ರಾಮ್ ಮೂಲಕ ಅವರು ಚೀನಾದ ಸೈಬರ್ ವಂಚಕರೊಂದಿಗೆ ಸಂಪರ್ಕದಲ್ಲಿದ್ದು, ಬಳಿಕ ಅದೇ ಕ್ರಿಪ್ಟೋಕರೆನ್ಸಿಯನ್ನು ಅವರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು.
ಸುಮಾರು 70ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಸಂಗ್ರಹಿಸಿ ಚೀನಾದವರಿಗೆ ನೀಡಲಾಗಿತ್ತು. ನಂತರ ಚೀನಾದ ಸೈಬರ್ ವಂಚಕರು ಆ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುತ್ತಿದ್ದರು. ಆದರೆ ಆ ಹಣ ಸೈಬರ್ ವಂಚನೆಯ ಮೂಲಕ ಪಡೆದದ್ದಾಗಿತ್ತು ಎಂದು ತಿಳಿದುಬಂದಿದೆ. ಚೀನಾದವರ ಸೈಬರ್ ವಂಚನೆ ಬಗ್ಗೆ ಆರೋಪಿಗಳಿಗೆ ತಿಳಿದಿದ್ದರೂ ಸಹ, ಹಣದ ಆಸೆಗೆ ಅವರು ಅವರಿಗೆ ಸಾಥ್ ನೀಡಿದ್ದಾರೆ.








