ಬೆಂಗಳೂರು: ರಾಜ್ಯದ ವಾಹನಗಳಿಗೆ ಅತಿ ಸುರಕ್ಷತಾ ನೋಂದಣಿ ಫಲಕ (ಎಚ್ ಎಸ್ಆರ್ಪಿ) ಅಳವಡಿಕೆಗೆ ನೀಡಲಾಗಿದ್ದ ಗಡುವು ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎಂದು ಸಾರಿಗೆ ಇಲಾಖೆಯ ಉನ್ನತ ಮೂಲಗಳು ದೃಢಪಡಿಸಿವೆ.
ಏಕರೂಪ ನೋಂದಣಿ ಫಲಕ ಅಳವಡಿಕೆ ಹಾಗೂ ವಾಹನಗಳ ಸುರಕ್ಷತೆ ಮತ್ತು ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಸಲುವಾಗಿ ವಾಹನಗಳಿಗೆ ಎಚ್ಎಸ್ಆರ್ಪಿ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಎಚ್ಎಸ್ಆರ್ಪಿ ಅಳವಡಿಕೆಗೆ ಫೆ.17ರವರೆಗೆ ಗಡುವು ನೀಡಲಾಗಿತ್ತು. ಈವರೆಗೆ ಕಡಿಮೆ ವಾಹನಗಳ ಮಾಲೀಕರು ಎಚ್ಎಸ್ ಆರ್ಪಿ ಅಳವಡಿಸಿಕೊಂಡಿದ್ದಾರೆ.
ಆನ್ಲೈನ್ ನಲ್ಲಿ ಬುಕ್ಕಿಂಗ್ ವೇಳೆ ತಾಂತ್ರಿಕ ಸಮಸ್ಯೆ ಹೆಚ್ಚಾಗುತ್ತಿದೆ. ಹೀಗಾಗಿ, ಗಡುವು ಮತ್ತೆ ವಿಸ್ತರಣೆಗೆ ಕೋರಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸುತ್ತಿರುವ ಸಾರಿಗೆ ಇಲಾಖೆ ಗಡುವು ವಿಸ್ತರಣೆ ಮಾಡುವುದಕ್ಕೆ ನಿರ್ಧರಿಸಿದೆ. ಮುಂದಿನ ದಿನದಲ್ಲಿ ಮತ್ತೊಂದು ಬಾರಿ ಚರ್ಚೆ ನಡೆಸಿ ಆದೇಶ ಹೊರಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಯಾವ ವಾಹನಗಳಿಗೆ ಈ ನಿಯಮ ಅನ್ವಯವಾಗುತ್ತದೆ?
* ಏಪ್ರಿಲ್ 2019 ಕ್ಕಿಂತ ಮೊದಲು ನೋಂದಣಿ ಮಾಡಿಸಿಕೊಂಡ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಲಘು ಮೋಟಾರು ವಾಹನ, ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರ್ಯಾಕ್ಟರ್, ಪ್ರಯಾಣಿಕರ ಕಾರು ಸೇರಿ ಎಲ್ಲ ಹಳೆಯ ವಾಹನಗಳಿಗೆ ಈ ನಿಯಮ ಅನ್ವಯವಾಗಲಿದೆ.
* ಹೆಚ್.ಎಸ್.ಆರ್.ಪಿ ಅಳವಡಿಕೆಯ ಕಾರ್ಯವಿಧಾನ
https://transport.karnataka.gov.in ಅಥವಾ www.siam.in ಭೇಟಿ ನೀಡಿ ಮತ್ತು Book HSRP ನ್ನು ಕ್ಲಿಕ್ ಮಾಡಿ.
* ನಿಮ್ಮ ವಾಹನ ತಯಾರಕರನ್ನು ಆಯ್ಕೆಮಾಡಿ.
ವಾಹನದ ಮೂಲ ವಿವರಗಳನ್ನು ಭರ್ತಿ ಮಾಡಿ.
* HSRP ಅಳವಡಿಕೆಗಾಗಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಡೀಲರ್ ಸ್ಥಳವನ್ನು ಆಯ್ಕೆಮಾಡಿ.
* HSRP ಶುಲ್ಕವನ್ನು ಆನ್ಲೈನ್ನಲ್ಲಿ ಪಾವತಿಸಿ. ಶುಲ್ಕ ಪಾವತಿಯನ್ನು ನಗದು ರೂಪದಲ್ಲಿ ಮಾಡುವಂತಿಲ್ಲ.
* ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒಟಿಪಿ ರವಾನಿಸಲಾಗುವುದು.
* ನಿಮ್ಮ ಅನುಕೂಲಕ್ಕೆ, ತಕ್ಕಂತೆ HSRP ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆಮಾಡಿ.
* ನಿಮ್ಮ ವಾಹನದ ಯಾವುದೇ ತಯಾರಕ/ಡೀಲರ್ ಸಂಖ್ಯೆಗೆ ಭೇಟಿ ನೀಡಿ.
* ವಾಹನ ಮಾಲೀಕರ ಕಚೇರಿ ಆವರಣ/ಮನೆಯ ಸ್ಥಳದಲ್ಲಿ HSRP ಅಳವಡಿಕೆಗಾಗಿ ಆಯ್ಕೆ ಮಾಡಬಹುದು.