ಧಾರವಾಡ : ಧಾರವಾಡದಲ್ಲಿ ಘೋರ ಘಟನೆಯೊಂದು ನಡೆದಿದ್ದು, ಕೆರೆಯಲ್ಲಿರುವ ಕಲುಷಿತ ನೀರು ಸೇವಿಸಿ 19ಕ್ಕೂ ಹೆಚ್ಚು ಜನರಿಗೆ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಜಿಲ್ಲೆಯ ನವಲಗುಂದ ತಾಲೂಕಿನ ಗುಡಿಸಾಗರ ಗ್ರಾಮದಲ್ಲಿ ನಡೆದಿದೆ.
ಜನರು ಜ್ವರದಿಂದ ಬಳಲಿದ್ದು, ಬಳಿಕ ವಾಂತಿ, ಭೇದಿ, ಹೊಟ್ಟೆನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು. ಈ ಬಾರಿ ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಬೇರೆ ಬೇರೆ ಕಡೆಗಳಿಂದ ನೀರು ಕೆರೆಗೆ ಹರಿದುಬಂದಿದೆ. ಕೆರೆ ನೀರು ಕಲುಷಿತಗೊಂಡ ಕಾರಣದಿಂದ ಜನರಿಗೆ ಜ್ವರ ಬಂದಿದ್ದು, ವಾಂತಿ, ಭೇದಿ ಕಾಣಿಸಿಕೊಂಡಿರುವ ಸಾಧ್ಯತೆಯಿದೆ. ಇದರಿಂದ ಅಲ್ಲಿನ ಜನರು ಕಂಗಾಲಾಗಿದ್ದಾರೆ.
ಕೆಲವರು ಗ್ರಾಮದಲ್ಲಿರುವ ಖಾಸಗಿ ಆಸ್ಪತ್ರೆ ಹಾಗೂ ಔಷಧ ಅಂಗಡಿಗಳಲ್ಲಿ ಮಾತ್ರ ತೆಗೆದುಕೊಂಡರೆ, ಕೆಲವರು ಅತಿಯಾಗಿ ಭೇದಿಮತ್ತು ಹೊಟ್ಟೆ ನೋವಿನಿಂದ ಬಳಲಿ ನವಲಗುಂದ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತಹಶಿಲ್ದಾರ್ ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.