ಬೆಂಗಳೂರು:ಮುಖ್ಯಮಂತ್ರಿಯವರ ನೇರ ಉಸ್ತುವಾರಿಯಲ್ಲಿರುವ ಆರ್ಥಿಕ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಸೇರಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 1.37 ಲಕ್ಷಕ್ಕೂ ಹೆಚ್ಚು ಕಡತಗಳು ವಿಲೇವಾರಿಗೆ ಬಾಕಿ ಇವೆ.ಹೆಚ್ಚಿನ ಸಂಖ್ಯೆಯಲ್ಲಿ ಕಡತಗಳು ಬಾಕಿ ಇರುವುದು ಗೊತ್ತಾಗುತ್ತಿದ್ದಂತೆಯೇ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತಕ್ಷಣ ವಿಲೇವಾರಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿ ಸಚಿವಾಲಯದಲ್ಲಿಯೇ ಕಡತಗಳು ವಿಲೇವಾರಿ ಆಗುತ್ತಿಲ್ಲ ಎಂದು ಕೆಲವು ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದರ ಬೆನ್ನಲ್ಲೆ, 39 ಇಲಾಖೆಗಳಲ್ಲಿ ಸಾವಿರಾರು ಕಡತಗಳು ವಿಲೇವಾರಿಯಾಗದೆ ಉಳಿದಿರುವ ಮಾಹಿತಿ ಬಹಿರಂಗವಾಗಿದೆ.2023ರ ನವೆಂಬರ್ 30ರ ಅಂತ್ಯಕ್ಕೆ ಒಟ್ಟು 1,55,795 ಕಡತಗಳು ಬಾಕಿ ಇದ್ದವು. ಡಿಸೆಂಬರ್ ಮತ್ತು ಜನವರಿ ಈ ಎರಡು ತಿಂಗಳಲ್ಲಿ ಹೊಸದಾಗಿ 35,036 ಕಡತಗಳನ್ನು ತೆರೆಯಲಾಗಿದೆ. ಈ ಅವಧಿಯಲ್ಲಿ 52,935 ಕಡತಗಳನ್ನು ಮುಕ್ತಾಯಗೊಳಿಸಲಾಗಿದೆ.
ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಿರುವ ವಿಷಯದ ಕುರಿತು ಎಲ್ಲ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳಿಗೆ ಮರುದಿನವೇ (ಫೆ. 2) ಟಿಪ್ಪಣಿ ಕಳುಹಿಸಿರುವ ಮುಖ್ಯ ಕಾರ್ಯದರ್ಶಿ, ಕಡತಗಳ ವಿಲೇವಾರಿ ಆಗದಿರುವ ವಿಚಾರದಲ್ಲಿ ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿರುವುದನ್ನೂ ಉಲ್ಲೇಖಿಸಿದ್ದಾರೆ. ಖುದ್ದು ಗಮನಹರಿಸಿ, ಫೆಬ್ರುವರಿ ಅಂತ್ಯಕ್ಕೆ ಕನಿಷ್ಠ ಶೇಕಡ 10ರಷ್ಟು ಕಡತಗಳನ್ನು ವಿಲೇವಾರಿ ಮಾಡಬೇಕು ಎಂದು ಗುರಿ ನಿಗದಿಪಡಿಸಿದ್ದಾರೆ.
ಅಲ್ಲದೆ, ಎಲ್ಲ ಇಲಾಖೆಗಳ ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳೊಂದಿಗೆ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಸಭೆ ನಡೆಸಿ, ಕಡತ ವಿಲೇವಾರಿಯಲ್ಲಿ ಆಗುತ್ತಿರುವ ವಿಳಂಬಕ್ಕೆ ಕಾರಣ ಮತ್ತು ವಿಲೇವಾರಿ ಪ್ರಕ್ರಿಯೆಯಲ್ಲಿ ಏನಾದರೂ ತೊಡಕುಗಳಿವೆಯೇ ಎಂಬ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಬೇಕು. ತ್ವರಿತವಾಗಿ ವಿಲೇವಾರಿ ಮಾಡಿ ಪ್ರಗತಿ ಸಾಧಿಸಿದ ವರದಿಯನ್ನು ಸಲ್ಲಿಸಬೇಕು ಎಂದೂ ಅವರು ಸೂಚನೆ ನೀಡಿದ್ದಾರೆ.