*ಅವಿನಾಶ್ ಆರ್ ಭೀಮಸಂದ್ರ
ಬೆಂಗಳೂರು: ಇಂದಿನಿಂದ ವಿಧಾನಮಂಡಲ ಮಳೆಗಾಲದ ಅಧಿವೇಶನ ಶುರುವಾಗಲಿದ್ದು, ವಿಧಾನಮಂಡಲದ ಮೊದಲ ದಿನವಾದ ಇಂದು ಅಗಲಿದ ಗಣ್ಯರಿಗೆ ನಮನವನ್ನು ಅರ್ಪಿಸಿ, ನಾಳೆಗೆ ಮುಂದೂಡಲಾಗುವುದು ಎನ್ನಲಾಗಿದೆ. ಅಧಿವೇಶನ ಅಧಿಕೃತವಾಗಿ ಮಂಗಳವಾರದಿಂದ ಶುರುವಾಗಲಿದ್ದು, ಮಂಗಳವಾರದಿಂದ ಆಡಳಿತ-ಪ್ರತಿಪಕ್ಷ ನಡುವೆ ಕಾವೇರಿದ ಚರ್ಚೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ.
ಬೆಂಗಳೂರು-ಮೈಸೂರು ಹೈವೇಯ ಅವಾಂತರ 40 ಪರ್ಸೆಂಟ್ ಕಮಿಷನ್ ಪಿಎಸ್ಐ, ಕೆಪಿಟಿಸಿಎಲ್, ಪದವಿ ಕಾಲೇಜು ಉಪನ್ಯಾಸಕರ ನೇಮಕಾತಿಯಲ್ಲಿ ಹಗರಣ, ಬೆಂಗಳೂರು ಹಾಗೂ ರಾಜ್ಯದಲ್ಲಿ ಉಂಟಾಗಿರುವ ನೆರೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರದ ವಿರುದ್ದ ಮುಗಿ ಬೀಳಲು ಪ್ರತಿಪಕ್ಷಗಳು ಮುಂದಾಗಿದೆ. ಈ ನಡುವೆ ಶನಿವಾರ ಜನಸ್ಪಂದನೆ ಕಾರ್ಯಕ್ರವನ್ನು ನಡೆಸಿ ಯಶಸ್ಸಿನ ಗುಂಗಿನಲ್ಲಿರುವ ರಾಜ್ಯ ಸರ್ಕಾರ ಕಾರ್ಯಕ್ರಮದಲ್ಲಿ ನಡೆಸಿದ ವಾಗ್ದಾಳಿಯನ್ನು ಸದನದಲ್ಲಿ ಕೂಡ ಮುಂದುವರೆಸಲಿದ್ದು ಹೇಗೆಲ್ಲ ಪ್ರತಿಪಕ್ಷಗಳ ಟೀಕೆಗಳಿಗೆ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎನ್ನುವುದರ ಬಗ್ಗೆ ಸಚಿವರಿಗೆ ಶಾಸಕರಿಗೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಇದಲ್ಲದೇ ಹಲವು ಕಾಯಿದೆಗಳನ್ನು ಕೂಡ ರಾಜ್ಯ ಸರ್ಕಾರ ಮಂಡನೆ ಮಾಡಲಿದ್ದು, ಈ ಬಾರಿಯ ಅಧಿವೇಶನವು ಉಭಯ ನಾಯಕರುಗಳ ವಾಕ್ಸಮರಕ್ಕೆ ಕಾರಣವಾಗುವುದರಲ್ಲಿ ಸಂಶಯವಿಲ್ಲ.