ಉತ್ತರಕನ್ನಡ : ರಾಜ್ಯದಲ್ಲಿ ಮತ್ತೆ ಮಂಗನ ಕಾಯಿಲೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಕೆಸ್ ಹೆಚ್ಚಳವಾಗುತ್ತಿದ್ದೂ, ಹತ್ತು ದಿನಗಳಲ್ಲಿ 21 ಮಂಗನ ಕಾಯಿಲೆ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಸಿದ್ದಾಪುರ ತಾಲೂಕಿನಲ್ಲಿ ಪ್ರಕರಣಗಳು ಇದೀಗ ಹೆಚ್ಚಾಗುತ್ತಿವೆ. ಒಟ್ಟು 21 ಸೋಂಕಿತರ ಪೈಕಿ ಎಂಟು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಇಬ್ಬರು ಮಂಗಳೂರು ಮಣಿಪಾಲ್ ಆಸ್ಪತ್ರೆಗೆ ದಾಖಲಾದರೆ, ಉಳಿದ 6 ಜನರಿಗೆ ಸಿದ್ದಾಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಇನ್ನುಳಿದ 13 ಸೋಂಕಿತರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಜಿಲ್ಲೆಯಲ್ಲಿ ಮಂಗನ ಕಾಯಿಲೆ ಪಸರಿಸುತ್ತಿದೆ. ಕೆಲವು ವರ್ಷಗಳಿಂದ ಮಂಗನ ಕಾಯಿಲೆ ಪತ್ತೆ ಆಗದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೊಡಬೇಕಿರುವ ಲಸಿಕೆ ಬಗ್ಗೆಯೂ ಇಲಾಖೆ ಯೋಚನೆ ಮಾಡದೆ ಸುಮ್ಮನಾಗಿತ್ತು. ಹೀಗಾಗಿ ಇದೀಗ ಮಂಗನ ಕಾಯಿಲೆ ರೋಗ ಪತ್ತೆಯಾಗಿದ್ದು, ಇದು ಹೆಚ್ಚಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಪರದಾಡುತ್ತಿದೆ. ಅದರಲ್ಲೂ ಚಳಿಗಾಲ ಪ್ರಾರಂಭವಾಗುತ್ತಿರುವ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿಗರಿಗೆ ಮಂಗನ ಕಾಯಿಲೆ ಆತಂಕ ಕಾಡುತ್ತಿದೆ.
ಕಳೆದ ಐದು ವರ್ಷದಲ್ಲಿ ಮಂಗನ ಕಾಯಿಲೆಗೆ ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಜನ ಸೋಂಕಿತರಾಗಿದ್ದು, 8 ಜನ ಈ ಕಾಯಿಲೆಯಿಂದ ಮೃತರಾಗಿದ್ದರು. ಇದೀಗ ಶಿವಮೊಗ್ಗ ಜಿಲ್ಲೆಯ ಗಡಿಯನ್ನು ಹೊಂದುಕೊಂಡಿರುವ ಸಿದ್ದಾಪುರದ ಕೊರ್ಲಕೈ, ಬಿಳಗಿ ಗ್ರಾಮದ ಒಟ್ಟು 7 ಜನರಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡರೇ ಹಲವು ಜನರಲ್ಲಿ ಈ ಸೊಂಕಿನ ಲಕ್ಷಣ ಕಂಡುಬಂದಿದೆ. ಇನ್ನು ಈ ಭಾಗದ ಜನರ ರಕ್ತ ಮಾದರಿ ಸಹ ಪಡೆಯಲಾಗುತ್ತಿದ್ದು, ಈ ಭಾಗದಲ್ಲಿ ಎರಡು ಮಂಗಳು ಸಾವನ್ನಪ್ಪಿದೆ.
ಸಧ್ಯ ಮಾರಣಾಂತಿಕ ಮಂಗನ ಕಾಯಿಲೆ ಉತ್ತರ ಕನ್ನಡ ಜಿಲ್ಲೆಯ ಮಲೆನಾಡಿಗರನ್ನು ಬೆಂಬಿಡದೇ ಕಾಡುತಿದ್ದು, ಎರಡು ವರ್ಷದಿಂದ ಲಸಿಕೆ ಇಲ್ಲದೇ “ತೈಲವೇ ಗತಿ” ಎನ್ನುವಂತಾಗಿದೆ. ದೊಡ್ಡ ಮಟ್ಟದ ಸಾವು-ನೋವುಗಳು ಆಗುವುದರೊಳಗೆ ಸರ್ಕಾರ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕಿದೆ.