ಬೆಂಗಳೂರು : ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂತೆ ಸಿಎಂ ಸಿದ್ದರಾಮಯ್ಯ ಮೈಸೂರಿನ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಅಂತ ಹೇಳಿಕೆ ನೀಡಿದ್ದ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು ಅದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜಕಾರಣ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ನನ್ನ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಅಪಮಾನ ಮಾಡುವ ಉದ್ದೇಶದಿಂದ ನಾನು ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕುರಿತು ನಾನು ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾಲ್ವಡಿ ಅವರು ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಸಾಧನೆ ಕಡಿಮೆ ಮಾಡಿ ನಮ್ಮ ಸರ್ಕಾರ ಹೆಚ್ಚು ಕೆಲಸ ಮಾಡಿದೆ ಎಂದು ನಾನು ಹೇಳಲು ಹೊರಟಿದ್ದಲ್ಲ. ನಾಲ್ವಡಿ ಅವರನ್ನು ಬಿಟ್ಟರೆ ಮೈಸೂರಿಗೆ ಹೆಚ್ಚು ಅನುದಾನ ನೀಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಂದಷ್ಟೇ ತಿಳಿಸುವುದು ನನ್ನ ಉದ್ದೇಶವಾಗಿತ್ತು ಎಂದು ತಿಳಿಸಿದ್ದಾರೆ.