ನವದೆಹಲಿ: ಇತ್ತೀಚಿಗೆ ರಾಜ್ಯದಲ್ಲಿ ಪನ್ನೀರ್, ಐಸ್ ಕ್ರೀಮ್, ತುಪ್ಪ, ಖೋವಾ ಸೇರಿದಂತೆ ಹಲವು ವಸ್ತುಗಳಲ್ಲಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಅಂಶಗಳು ಪತ್ತೆಯಾಗಿದ್ದವು. ಇದೀಗ ಗ್ರಾಹಕರಿಗೆ ಪೂರೈಸುವ ಊಟ- ತಿನಿಸುಗಳಲ್ಲಿ ‘ಅನಲಾಗ್ ಪನೀರ್’ ಬಳಸಿದ್ದರೆ ಅದನ್ನು ಹೋಟೆಲ್‌ಗಳು ಸ್ಪಷ್ಟವಾಗಿ ನಮೂದಿಸಬೇಕು ಎಂಬುದನ್ನು ಕಡ್ಡಾಯಗೊಳಿಸಲು ಕೇಂದ್ರ ಗ್ರಾಹಕರ ವ್ಯವಹಾರಗಳ ಸಚಿವಾಲಯ ಮುಂದಾಗಿದೆ.
ಅನಲಾಗ್ ಪನೀರ್‌ನ ಪ್ಯಾಕೆಟ್ ಮೇಲೆ ಉತ್ಪಾದಕರು ‘ಡೈರಿಯೇತರ (ನಾನ್-ಡೈರಿ)’ ಎಂಬುದಾಗಿ ನಮೂದಿಸುವುದನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಈಗಾಗಲೇ ಕಡ್ಡಾಯಗೊಳಿಸಿದೆ. ಆದರೆ ಈ ನಿಯಮವು ಪ್ರಸ್ತುತ ಹೋಟೆಲ್‌ಗಳಲ್ಲಿ ಬಡಿಸುವ ಸಿದ್ಧಪಡಿಸಿದ ಆಹಾರಕ್ಕೆ ಅನ್ವಯಿಸುವುದಿಲ್ಲ.
ಅನಲಾಗ್ ಪನೀರ್ ಕೂಡ ನೋಡುವುದಕ್ಕೆ ಮತ್ತು ರುಚಿಯಲ್ಲಿ ನೈಜ ಪನೀರನ್ನೇ ಹೋಲುತ್ತದೆ. ಸೋವಿಯಾದ್ದರಿಂದ ಅದನ್ನು ಹೋಟೆಲ್‌ಗಳು ಗ್ರಾಹಕರೆದುರು ಬಹಿರಂಗಪಡಿಸುವುದಿಲ್ಲ. ಇನ್ನು ಮುಂದೆ ಅಡುಗೆಯಲ್ಲಿ ಅನಲಾಗ್ ಪನೀರ್ ಬಳಸಿರುವುದನ್ನು ಗ್ರಾಹಕರಿಗೆ ಹೋಟೆಲ್‌ಗಳು ಮೊದಲೇ – ತಿಳಿಸಬೇಕು ಎಂಬುದನ್ನು ಕಡ್ಡಾಯ ಮಾಡಲಾಗುವುದು ಎಂದು – ಗಾಹಕ ವ್ಯವಹಾರಗಳ ಕಾರ್ಯದರ್ಶಿ ನಿಧಿ ಖಾರೆ ತಿಳಿಸಿದ್ದಾರೆ.
ಏನಿದು ಅನಲಾಗ್ ಪನೀರ್?
ಸಿಂಥೆಟಿಕ್ ಅಥವಾ ನಕಲಿ ಪನೀರ್ ಎಂದೂ ಕರೆಯಲ್ಪಡುವ ಅನಲಾಗ್ ಪನೀರನ್ನು ಸಸ್ಯಜನ್ಯ ಎಣ್ಣೆಗಳು, ಪಿಷ್ಟಗಳು, ಎಮಲ್ಸಿಫೈಯರ್ ಗಳಂತಹ ಅಗ್ಗದ, ಡೈರಿಯೇತರ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಹಾಲಿನಿಂದ ತಯಾರಿಸಿದ ನೈಜ ಪನೀರ್‌ಗೆ ಪರ್ಯಾಯವಾಗಿ ಇದನ್ನು ಬಳಸಲಾಗುತ್ತಿದೆ. ಇದು ಕಡಿಮೆ ಪ್ರೊಟೀನ್, ಅನಾರೋಗ್ಯಕರ ಕೊಬ್ಬು ಮತ್ತು ಕಾರ್ಬೊಹೈಡ್ರೆಟ್‌ಗಳನ್ನು ಹೊಂದಿರುತ್ತದೆ. ನೈಜ ಪನೀರ್‌ನ ಅರ್ಧದಷ್ಟು ಬೆಲೆಯಲ್ಲಿ ಇದು ಸಿಗುತ್ತದೆ. ಕೆಲವು ಉತ್ಪಾದಕರು ಕಡಿಮೆ ಗುಣಮಟ್ಟದ ಸಸ್ಯಜನ್ಯ ಎಣ್ಣೆ ಮತ್ತಿತರ ಪದಾರ್ಥಗಳನ್ನು ಬಳಸಿ ಇದನ್ನು ತಯಾರಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ ಎಂಬ ಕೂಗು ಎದ್ದಿದೆ.