ಬೆಂಗಳೂರು : ತಮ್ಮ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂಬ ರಾಜ್ಯ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ಆರೋಪ ನಿರಾಧಾರವಾಗಿದೆ. ಸಚಿವರ ಆಪಾದನೆಗೆ ಯಾವುದೇ ಪುರಾವೆ ಇಲ್ಲ ಎಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿ ವಿಚಾರಣೆಯನ್ನು ಅಪರಾಧ ತನಿಖಾ ಇಲಾಖೆ (ಸಿಐಡಿ) ಪೂರ್ಣಗೊಳಿಸಿದೆ. ಈ ಮೂಲಕ ಏಳು ತಿಂಗಳ ಹಿಂದೆ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಹನಿಟ್ರ್ಯಾಪ್ ಯತ್ನ ವಿವಾದವು ತಾರ್ಕಿಕ ಅಂತ್ಯ ಕಂಡಿದೆ.
ಈ ಪ್ರಕರಣದ ಕುರಿತು ಸುದೀರ್ಘವಾಗಿ ವಿಚಾರಣೆ ನಡೆಸಿದ ಸಿಐಡಿ ಅಧಿಕಾರಿಗಳು, ಕೊನೆಗೆ ಆರೋಪದಲ್ಲಿ ಹುರುಳಿಲ್ಲವೆಂದು ಷರಾ ಬರೆದು ಸರ್ಕಾರಕ್ಕೆ ವಿಚಾರಣಾ ವರದಿಯನ್ನು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ವಿಧಾನಸಭಾ ಅಧಿವೇಶನದ ವೇಳೆ ತಮ್ಮ ಮೇಲೆ ಮೂರು ಬಾರಿ ಹನಿಟ್ರ್ಯಾಪ್ ಯತ್ನ ನಡೆದಿತ್ತು ಎಂದು ಸಚಿವ ರಾಜಣ್ಣಗಂಭೀರ ಸ್ವರೂಪದ ಆರೋಪ ಮಾಡಿದ್ದರು.
ಹನಿಟ್ರ್ಯಾಪ್ ಯತ್ನ ಪ್ರಕರಣ ಸಂಬಂಧ ಬೆಂಗಳೂರಿನಲ್ಲಿರುವ ಸಚಿವರ ಮನೆ, ಗೃಹ ಕಚೇರಿ ಹಾಗೂ ಮಧುಗಿರಿ ಮನೆಯಲ್ಲಿ ಸಿಐಡಿ ತಂಡ ಪರಿಶೀಲನೆ ನಡೆಸಿತ್ತು. ಅಲ್ಲದೆ ಸಚಿವರು, ಅವರ ಆಪ್ತ ಸಹಾಯಕರು, ಭದ್ರತಾ ಸಿಬ್ಬಂದಿ ಹಾಗೂ ಮನೆ ಹೇಳಿವೆ. ಕೆಲಸಗಾರರನ್ನು ಸಿಐಡಿ ಅಧಿಕಾರಿಗಳು ವಿಚಾರಣೆಗೊಳಪಡಿಸಿ ಹೇಳಿಕೆ ಪಡೆದಿದ್ದರು. ಆದರೆ ಯಾರೊಬ್ಬರೂ ಹನಿಟ್ರ್ಯಾಪ್ ಯತ್ನ ಆರೋಪಕ್ಕೆ ಪೂರಕವಾದ ಮಾಹಿತಿ ನೀಡಲಿಲ್ಲ ಎಂದು CID ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ತಾವು ಮಾಡಿದ್ದ ಆರೋಪಕ್ಕೆ ಸಾಕ್ಷ್ಯ ಒದಗಿಸುವಂತೆ ಸಚಿವರಿಗೆ ಅಧಿಕಾರಿಗಳು ಸೂಚಿಸಿದ್ದರು. ಆದರೆ ‘ನೀವೇ ತನಿಖೆ ಮಾಡಿ. ನನಗೆ ಯಾರೂ ಗೊತ್ತಿಲ್ಲ. ನನ್ನ ಮನೆಗೆ ಬಂದು ಕೈ ಹಿಡಿದು ಎಳೆದಾಡಿದಾಗ ಕಪಾಳಕ್ಕೆ ಬಿಗಿದು ಕಳುಹಿಸಿದ್ದೆ. ಆದರೆ ಹುಡುಗಿಯ ಪರಿಚಯವೂ ಇಲ್ಲ ಗುರುತು ಇಲ್ಲ’ ಎಂದು ರಾಜಣ್ಣ ಹೇಳಿಕೆ ಕೊಟ್ಟಿದ್ದರು. ಹೀಗಾಗಿ ಸಚಿವರ ಮನೆಯಲ್ಲಿ ಸಿಸಿಟಿವಿ ಅಳವಡಿಸಿರಲಿಲ್ಲ. ಸರ್ಕಾರಿ ನಿವಾಸದ ಸಂದರ್ಶಕರ ನೋಂದಣಿ ಪುಸಕ್ತದಲ್ಲಿ ಸಚಿವರ ಭೇಟಿಗೆ ಬಂದವರ ಮಾಹಿತಿ ಕೂಡ ಸಿಗಲಿಲ್ಲ ಎಂದು ಸಿಐಡಿ ಹೇಳಿರುವುದಾಗಿ ಉನ್ನತ ಮೂಲಗಳು ಹೇಳಿವೆ. ಈ ಎಲ್ಲ ಅಂಶಗಳನ್ನು ಆಧರಿಸಿ ಸಚಿವರ ಆರೋಪಕ್ಕೆ ಆಧಾರರಹಿತವಾಗಿವೆ ಎಂದು ಅಂತಿಮ ವರದಿಯಲ್ಲಿ ತಿಳಿಸಿರುವುದಾಗಿ ಗೊತ್ತಾಗಿದೆ.