ಬೆಂಗಳೂರು : 2025-26 ಶೈಕ್ಷಣಿಕ ಸಾಲಿನಲ್ಲಿ ಗಣಿತ-ಗಣಕ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಶಾಲಾ ಅವಧಿಯ ನಂತರ ಫೋನ್ ಕರೆಗಳ ಮೂಲಕ(ರಿಮೋಟ್ ಟ್ಯೂಟರಿಂಗ್) ಬೋಧನೆಯನ್ನು ಪ್ರಾರಂಭಿಸುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಗಣಿತ ಗಣಕ ಕಾರ್ಯಕ್ರಮವು 2025-2026 ರ ಬಜೆಟ್ ಭಾಷಣದಲ್ಲಿ ಘೋಷಿಸಿದಂತೆ ಕರ್ನಾಟಕ ಸರ್ಕಾರದ ಉಪಕ್ರಮವಾಗಿದೆ. ಅಲೋ ಕಿಟ್ ಹಾಗೂ ಯೂತ್ ಇಂಪ್ಯಾಕ್ಟ್ ಸಂಸ್ಥೆಯವರು ತಾಂತ್ರಿಕ ಬೆಂಬಲದ ಪಾಲುದಾರರಾಗಿರುತ್ತಾರೆ. 2025-26ನೇ ಸಾಲಿನ ಆಯವ್ಯಯದಲ್ಲಿ ಗಣಿತ ಗಣಕ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಸರ್ಕಾರಿ ಶಾಲೆಗಳಲ್ಲಿ 3 ರಿಂದ 5 ನೇ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಗಣಿತ ಕಲಿಕೆಯಲ್ಲಿ ಆಸಕ್ತಿ ಅಭಿವೃದ್ಧಿಸಿ ಮೂಲ ಗಣಿತ ವಿಷಯ ಪರಿಕಲ್ಪನೆಗಳನ್ನು ಶಿಕ್ಷಕರಿಂದ ಮಕ್ಕಳಿಗೆ ಶಾಲಾ ಅವಧಿಯ ನಂತರ ಫೋನ್ ಕರೆಗಳ ಮೂಲಕ (ರಿಮೋಟ್ ಟ್ಯೂಟರಿಂಗ್) ಅರ್ಥೈಸುವುದು ಮತ್ತು ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದು ಹಾಗೂ ಕಾರ್ಯಕ್ರಮದ ಆಯೋಜನೆಗೆ ಶಿಕ್ಷಕರಿಗೆ ವಿವಿಧ ಹಂತಗಳಲ್ಲಿ ತರಬೇತಿ ನೀಡಿ, ಶಿಕ್ಷಕರಲ್ಲಿ ಅಗತ್ಯ ಕೌಶಲ್ಯಗಳನ್ನು ವೃದ್ಧಿಸಿ ಕಾರ್ಯಕ್ರಮವನ್ನು ನಿರ್ವಹಿಸುವುದು ಮುಖ್ಯ ಉದ್ದೇಶವಾಗಿರುತ್ತದೆ.
2025-26ನೇ ಶೈಕ್ಷಣಿಕ ಸಾಲಿನ ಗಣಿತ-ಗಣಕ ಕಾರ್ಯಕ್ರಮದ ಫೋನ್ ಬೋಧನೆಯನ್ನು ಪ್ರಾರಂಭಿಸುವ ಕುರಿತು ತರಬೇತಿ ಪೂರ್ವಭಾವಿಯಾಗಿ 2024-25 ನೇ ಸಾಲಿನಲ್ಲಿ ಗಣಿತ ಗಣಕ ತರಬೇತಿ ಪಡೆದ 17 ಜಿಲ್ಲೆಗಳ 69 ತಾಲ್ಲೂಕುಗಳಲ್ಲಿ ಈಗಾಗಲೇ ಗಣಿತ ಗಣಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ.
ಮುಂದುವರೆದು 2025-26ನೇ ಶೈಕ್ಷಣಿಕ ಸಾಲಿನಲ್ಲಿ ಪಿ.ಎ.ಬಿ ಅನುಮೋದಿತ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿಯಡಿಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ 3-5ನೇ ತರಗತಿ ಬೋಧಿಸುತ್ತಿರುವ ಶಿಕ್ಷಕರಿಗೆ ಗಣಿತ-ಗಣಕ ಕಾರ್ಯಕ್ರಮದ ಅನುಷ್ಠಾನ ಕುರಿತು ತರಬೇತಿಯನ್ನು ನೀಡಲಾಗಿದೆ.
ರಾಜ್ಯದ 35 ಜಿಲ್ಲೆಗಳ ಉಳಿದ 135 ತಾಲ್ಲೂಕುಗಳಲ್ಲಿ ಗಣಿತ ಗಣಕ ಕಾರ್ಯಕ್ರಮವನ್ನು ದಿನಾಂಕ: 01.01.2026 ರಿಂದ ಪ್ರಾರಂಭಿಸಲು ಸೂಚಿಸಿದೆ.
ಗಣಿತ-ಗಣಕ ಕಾರ್ಯಕ್ರಮದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಉಲ್ಲೇಖ-1 ಮತ್ತು ಆದೇಶದಂತೆ ಪ್ರತಿಯೊಂದು ಶಾಲೆಯ ಮುಖ್ಯೋಪಾಧ್ಯಾಯರು ತಮ್ಮ ಶಾಲೆಯಲ್ಲಿ ಗಣಿತ ಗಣಕ ತರಬೇತಿ ಪಡೆದ ಶಿಕ್ಷಕರನ್ನು ಗುರುತಿಸಿ ಕಾರ್ಯಕ್ರಮದ ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. 2 ರ
ಗಣಿತ ಗಣಕ ಕಾರ್ಯಕ್ರಮಕ್ಕೆ ಗುರುತಿಸಿದ ಎಲ್ಲಾ ಶಿಕ್ಷಕರು ಶಾಲಾ ಅವಧಿಯ ನಂತರ ಆಯ್ದ ವಿದ್ಯಾರ್ಥಿಗಳಿಗೆ ಫೋನ್ ಮೂಲಕ, ಪೋಷಕರ ಸಹಭಾಗಿತ್ವದೊಂದಿಗೆ ಗಣಿತದ ಮೂಲ ಕ್ರಿಯೆಯನ್ನು ಅರ್ಥೈಸಬೇಕು.
ಸದರಿ ಕಾರ್ಯಕ್ರಮವನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸಬೇಕಾಗಿದ್ದು, ಪ್ರತಿ ಹಂತವು 5 ವಾರಗಳ ಕಾಲ ನಡೆಯುತ್ತದೆ.
ಗಣಿತ ಗಣಕ ಫೋನ್ ಬೋಧನೆ ಅವಶ್ಯಕತೆಯಿರುವ ನಾಲ್ಕು ವಿದ್ಯಾರ್ಥಿಗಳ ಪಟ್ಟಿ ತಯಾರಿಸಿಕೊಳ್ಳಬೇಕು. ಪ್ರತಿ 5 ವಾರ ಚಕ್ರಕ್ಕೆ ಶಿಕ್ಷಕರು 4 ವಿದ್ಯಾರ್ಥಿಗಳನ್ನು ಆಯ್ಕೆಮಾಡಿಕೊಳ್ಳಬೇಕಾಗುತ್ತದೆ.
ಶಿಕ್ಷಕರು ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಗುರುತಿಸಲು ತರಬೇತಿಯಲ್ಲಿ ನೀಡಿದ ಮಾಹಿತಿಯಂತೆ ಬೇಸ್ಲೈನ್ ಕರೆ ಮೌಲ್ಯಾಂಕನ ನಡೆಸಿ, ಅದರ ಆಧಾರದ ಮೇಲೆ ಗಣಿತದ ಮೂಲ ಕ್ರಿಯೆಗಳನ್ನು ಕಲಿಸುವ ಕ್ರಮ ಕೈಗೊಳ್ಳಬೇಕು.
ಪ್ರತಿ ವಿದ್ಯಾರ್ಥಿಗೆ ವಾರಕ್ಕೆ 1 ಬಾರಿ ಫೋನ್ ಕರೆ ಮೂಲಕ ಗಣಿತದ ಮೂಲ ಕ್ರಿಯೆಗಳನ್ನು (ವಿದ್ಯಾರ್ಥಿಯ ಕಲಿಕಾ ಮಟ್ಟದ ಅನ್ವಯ) ವಿದ್ಯಾರ್ಥಿ-ಪೋಷಕರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ 30 ರಿಂದ 40 ನಿಮಿಷಗಳ ಫೋನ್ ಬೋಧನೆಯನ್ನು ನಿರ್ವಹಿಸಬೇಕು.
ಪ್ರತಿ ಫೋನ್ ಕರೆ ಅವಧಿಯ ನಂತರ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ವಿದ್ಯಾರ್ಥಿಯ ಹೆಸರು ಹಾಗೂ ವಿದ್ಯಾರ್ಥಿ ಕಲಿತ ಕಲಿಕಾಂಶವನ್ನು ಶಿಕ್ಷಕರು ಶಾಲೆಯಲ್ಲಿ ಕಡ್ಡಾಯವಾಗಿ ದಾಖಲಿಸುವುದು ಹಾಗೂ ಸದರಿ ದತ್ತಾಂಶವನ್ನು SATS ನಲ್ಲಿ ದಾಖಲಿಸಲು ತಿಳಿಸಿದೆ.









