ವಿಜಯಪುರ : ಬಿಜೆಪಿಯ ಕೇಂದ್ರೀಯ ಶಿಸ್ತು ಸಮಿತಿ ನೀಡಿದ ನೋಟಿಸ್ ಗೆ ಉತ್ತರಿಸದ ಹಿನ್ನೆಲೆಯಲ್ಲಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ವಿಜಯಪುರ ನಗರದಲ್ಲಿ ರಸ್ತೆ ತಡೆದು ಶಾಸಕ ಬಚನಗೌಡ ಪಾಟೀಲ್ ಯತ್ನಾಳ್ ಬೆಂಬಲಿಗರು ಹಾಗೂ ಅಪಾರ ಅಭಿಮಾನಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ಹೌದು ನಿನ್ನೆ ಬಿಜೆಪಿಯ ಕೇಂದ್ರೀಯ ಶಿಸ್ತು ಸಮಿತಿಯು ಫೆಬ್ರವರಿ 10ರಂದು ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ಸ್ವಪಕ್ಷದ ನಾಯಕರ ವಿರುದ್ಧವೆ ಗಂಭೀರವಾದ ಆರೋಪ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಉತ್ತರಿಸುವಂತೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ಆದರೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೋಟಿಸ್ ಗೆ ಉತ್ತರ ನೀಡಿರಲಿಲ್ಲ. ಹೀಗಾಗಿ ಕೇಂದ್ರೀಯ ಶಿಸ್ತು ಸಮಿತಿ 6 ವರ್ಷಗಳ ಕಾಲ ಯತ್ನಾಳರನ್ನು ಪಕ್ಷದಿಂದ ಉಚ್ಛಾಟಿಸಿ ಆದೇಶಿಸಿದ್ದಾರೆ.
ಯತ್ನಾಳ ಅವರ ಉಚ್ಚಾಟನೆ ಮಾಹಿತಿ ತಿಳಿಯುತ್ತಿದ್ದಂತೆ ಇತ್ತ ವಿಜಯಪುರದಲ್ಲಿ ರಾಜೀನಾಮೆ ಪರ್ವ ಆರಂಭವಾಗಿದ್ದು, ನಿನ್ನೆಯಿಂದ ಬಿಜೆಪಿ ನಗರ ಮೋರ್ಚಾ ಅಧ್ಯಕ್ಷ, ಉಪಾಧ್ಯಕ್ಷ ಬಿಜೆಪಿ ಎಸ್ ಟಿ ಮೋರ್ಚಾ ಪದಾಧಿಕಾರಿ ಸೇರಿದಂತೆ ಈಗಾಗಲೇ ಹಲವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅಲ್ಲದೆ ಇಂದು ವಿಜಯಪುರ ನಗರದಲ್ಲಿ ಶಾಸಕ ಯತ್ನಾಳ ಬೆಂಬಲಿಗರು, ಅಭಿಮಾನಿಗಳು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.