ಕೊಪ್ಪಳ : ಅಪ್ರಾಪ್ತವಯಸ್ಸಿನ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಕಳಮಳ್ಳಿ ತಾಂಡಾದ ವಿಜಯಕುಮಾರ ಚವ್ಹಾಣ ಇತನ ಮೇಲಿನ ಆರೋಪಸಾಭಿತಾಗಿದೆ ಎಂದು ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯ(ಪೋಕ್ಸೊ)ದ ನ್ಯಾಯಾಧೀಶರು, ಆರೋಪಿಗೆ ಶಿಕ್ಷೆ ವಿಧಿಸಿರುತ್ತಾರೆ.
2022ರ ಜುಲೈ 21ರಂದು ರಾತ್ರಿ 7.30 ಗಂಟೆ ಸುಮಾರಿಗೆ ಅಪ್ರಾಪ್ತ ವಯಸ್ಸಿನ ಬಾಲಕಿ ತನ್ನ ಗ್ರಾಮದಲ್ಲಿ ಗೆಳತಿಯ ಮನೆಗೆ ನೋಟ್ಸ್ ತೆಗೆದುಕೊಂಡು ಬರಲು ತನ್ನ ಮನೆಯಿಂದ ಹೊರಗಡೆ ಬಂದಾಗ, ತಾವರಗೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಕಳಮಳ್ಳಿ ತಾಂಡಾ ನಿವಾಸಿ ವಿಜಯಕುಮಾರ ಚವ್ಹಾಣ ಇತನು ತನ್ನ ಮೋಟಾರ ಸೈಕಲ್ ಮೇಲೆ ಬಂದು ಬಾಧಿತಳನ್ನು ಅಪಹರಿಸಿ ಕೊಂಡು ಹೇಮಗುಡ್ಡದ ದೇವಸ್ಥಾನಕ್ಕೆ ಹೋಗಿ, ಅಲ್ಲಿನ ಅಡುಗೆ ಮಾಡುವ ಶೆಡ್ಡಿನಲ್ಲಿ ಮಲಗಿ ರಾತ್ರಿ ವೇಳೆಯಲ್ಲಿ ಮದುವೆ ಯಾಗುವುದಾಗಿ ಪುಸಲಾಯಿಸಿ, ಅತ್ಯಾಚಾರ ಮಾಡಿದ್ದಾನೆ. ನಂತರ 4 ದಿನಗಳವರೆಗೆ ಅಲ್ಲಿಯೇ ತಂಗಿದ್ದು, ಆ ಅವಧಿಯಲ್ಲಿಯೂ ಪ್ರತಿದಿನ ಅತ್ಯಾಚಾರ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ತಾವರಗೇರಾ ಪೋಲಿಸ ಠಾಣೆಯ ಮಹಿಳಾ ಪಿ.ಎಸ್.ಐ ಮತಿ ವೈಶಾಲಿ ಝಳಕಿ ಅವರು ದೂರು ಸ್ವೀಕರಿಸಿ, ಪ್ರಥಮ ಹಂತದ ತನಿಖೆಯನ್ನು ನಿರ್ವಹಿಸಿ, ಮುಂದಿನ ತನಿಖೆಯನ್ನು ಕುಷ್ಟಗಿ ಸಿಪಿಐ ನಿಂಗಪ್ಪ ಎನ್.ಆರ್. ಅವರು ನಿರ್ವಹಿಸಿದ್ದು, ಈ ತನಿಖೆಯಲ್ಲಿ ಆರೋಪಿತನ ಮೇಲಿನ ಆರೋಪಣೆಗಳು ಮೇಲ್ನೋಟಕ್ಕೆ ಸಾಭಿತಾಗಿದ್ದರಿಂದ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣವು ಸ್ಪೇ.ಎಸ್‌ಸಿ(ಪೋಕ್ಸೊ) ಸಂ: 52/2022ರಲ್ಲಿ ದಾಖಲಾಗಿದ್ದು, ವಿಚಾರಣೆಯನ್ನು ನಡೆಸಿದ ನ್ಯಾಯಾಲಯವು, ಆರೋಪಿ ಕಳಮಳ್ಳಿ ತಾಂಡಾದ ವಿಜಯಕುಮಾರ ಚವ್ಹಾಣ ಇತನ ಮೇಲಿನ ಆರೋಪಣೆಗಳು ಸಾಭೀತಾಗಿವೆ ಎಂದು 20 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ. 20,000 ಗಳ ದಂಡವನ್ನು ಭರಿಸುವಂತೆ ಆದೇಶಿಸಿ, ಕೊಪ್ಪಳದ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯದ (ಪೋಕ್ಸೊ)ದ ನ್ಯಾಯಾಧೀಶರಾದ ಕುಮಾರ ಡಿ.ಕೆ ಅವರು 2025ರ ಫೆಬ್ರವರಿ 6 ರಂದು ತೀರ್ಪು ಹೊರಡಿಸಿರುತ್ತಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಅವರು ಪ್ರಕರಣ ನಡೆಸಿ, ವಾದ ಮಂಡಿಸಿದ್ದರು. ತಾವರಗೇರಾ ಪೊಲೀಸ್ ಠಾಣೆಯ ಸಿಬ್ಬಂದಿ ರಂಗನಾಥ ಅವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರಪಡಿಸುವಲ್ಲಿ ಸಹಕರಿಸಿರುತ್ತಾರೆ ಎಂದು ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.