ಬೆಂಗಳೂರು : ಇತ್ತೀಚಿಗೆ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕ್ರಮವಾಗಿ ನುಸುಳಿದ್ದ ಬಾಂಗ್ಲಾದೇಶ, ಪಾಕಿಸ್ತಾನ್ ಪ್ರಜೆಗಳನ್ನು ಪತ್ತೆ ಹಚ್ಚಲಾಗಿತ್ತು. ಇದೀಗ ಬೆಂಗಳೂರಲ್ಲಿ ಪೊಲೀಸರು ಮತ್ತೊಮ್ಮೆ ಭರ್ಜರಿ ಕಾರ್ಯಚರಣೆ ನಡೆಸಿದ್ದಾರೆ.
ಹೌದು ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ನಗರದ ಪೂರ್ವ ವಿಭಾಗದ ರಾಮ ಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೆ. ಚನ್ನಸಂದ್ರ ಹಾಗೂ ಕಲ್ಕೆರೆ ಪ್ರದೇಶದ ವಿವಿಧೆಡೆ ಪ್ಲೈವುಡ್ ಅಂಗಡಿ, ಗೋದಾಮು ಹಾಗೂ ಮನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ವಿವಿಧ ಸ್ತರಗಳಲ್ಲಿ ಪೊಲೀಸರು ತಪಾಸಣೆಗೊಳಪಡಿಸಿದ್ದಾರೆ.
ಈ ವೇಳೆ 1 ಸಾವಿರಕ್ಕೂ ಅಧಿಕ ಸಂಶಯಾಸ್ಪದ ವ್ಯಕ್ತಿಗಳ ಆಧಾರ್ ಕಾರ್ಡ್, ವಿದ್ಯಾಭ್ಯಾಸ ಮಾಡಿರುವ ಮೂಲ ಅಂಕಪಟ್ಟಿ, ಬ್ಯಾಂಕ್ ಖಾತೆ, ಪಾಸ್‌ಪೋರ್ಟ್ ವಿವಿಧ ದಾಖಲೆಗಳು ಹಾಗೂ ಪೋನ್ ಕರೆ ಮತ್ತು ಸಕ್ರಿಯರಾಗಿರುವ ವಾಟ್ಸ್ಆಪ್ ಗ್ರೂಪ್‌ಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಓರ್ವ ನೈಜೀರಿಯಾ ಪ್ರಜೆ ಸೇರಿದಂತೆ 11 ಜನ ಸಂಶಯಾಸ್ಪದ ಅಕ್ರಮ ನಿವಾಸಿಗಳು ಪತ್ತೆಯಾಗಿದ್ದು, ಆ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೋಲಿಸರು ತಿಳಿಸಿದರು.








