ಮಡಿಕೇರಿ : ಪರಿಸರದ ಮೇಲೆ ಪ್ಲಾಸ್ಟಿಕ್ ಬಳಕೆಯಿಂದ ಆಗುವ ಗಂಭೀರ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಸರ್ಕಾರಿ ಕಚೇರಿಗಳಲ್ಲಿ ಮತ್ತು ಸರ್ಕಾರಿ ಕಾರ್ಯಕ್ರಮಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬಾಟಲ್ಗಳಲ್ಲಿ ಕುಡಿಯುವ ನೀರು ಕೊಡುವಂತಿಲ್ಲ ಎಂಬ ಆದೇಶವನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.
ಇದರ ಬೆನ್ನಲ್ಲೆ ಮಡಿಕೇರಿಯಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್ ಮಾರಾಟ ನಿಷೇಧ ಮಾಡಲಾಗಿದ್ದು, ಪ್ಲಾಸ್ಟಿಕ್ ನೀರಿನ ಬಾಟಲ್ ಮಾರಾಟ ನಿಷೇಧಿಸಿ ಮಡಿಕೇರಿಯ ನಗರ ಸಭೆ ಈ ಒಂದು ಆದೇಶ ಹೊರಡಿಸಿದೆ. ಕಲ್ಯಾಣ ಮಂಟಪ ಸಭೆ ಸಮಾರಂಭಗಳಲ್ಲೂ ನೀರಿನ ಬಾಟಲ್ ನಿಷೇಧಿಸಿದೆ. ಜಿಲ್ಲೆಯಲ್ಲಿ ಪ್ರವಾಸಿಗರಿಂದ ಪ್ಲಾಸ್ಟಿಕ್ ನೀರಿನ ಬಾಟಲ್ ಬಳಕೆ ಮಾಡಲಾಗುತ್ತಿದ್ದು, ಈಗಾಗಲೇ ಖರೀದಿಸಿರುವ ನೀರಿನ ಬಾಟಲ್ ಮಾರಾಟಕ್ಕೆ ಸಮಯ ನಿಗದಿಪಡಿಸಲಾಗಿದೆ ಎಂದು ತಿಳಿದುಬಂದಿದೆ.
ಸರ್ಕಾರಿ ಆದೇಶದಲ್ಲೇನಿದೆ?
ಪ್ಲಾಸ್ಟಿಕ್ ವಸ್ತುಗಳ ಅತಿಯಾದ ಬಳಕೆಯಿಂದ ಆರೋಗ್ಯ ಮತ್ತು ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಯುವ ದೃಷ್ಟಿಯಿಂದ ಸಚಿವಾಲಯ ಸೇರಿದಂತೆ ರಾಜ್ಯಾದ್ಯಾಂತ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಸರ್ಕಾರಿ ಸೌಮ್ಯದ ಮಂಡಳಿ, ನಿಗಮ, ವಿಶ್ವವಿದ್ಯಾನಿಲಯಗಳು ಹಾಗೂ ಸರ್ಕಾರದಿಂದ ಅನುದಾನ ಪಡೆಯುವಂತಹ ಯಾವುದೇ ಸಂಸ್ಥೆಗಳ ವತಿಯಿಂದ ಏರ್ಪಡಿಸಲ್ಪಡುವ ಸಭೆ ಸಮಾರಂಭಗಳಲ್ಲಿ ಏಕಕಾಲಿಕ ಬಳಕೆಯ ಪ್ಲಾಸ್ಟಿಕ್ ಬಾಟಲ್ನ ನೀರಿನ ಬಳಕೆ/ ಸರಬರಾಜು ಮಾಡುವುದನ್ನು ನಿಷೇಧಿಸಲಾಗಿದೆ. ಇಂತಹ ಸಭೆ ಸಮಾರಂಭಗಳಲ್ಲಿ ಕುಡಿಯುವ ನೀರನ್ನು ಸಂದರ್ಭಾನುಸಾರ ಶುಚಿತ್ವ ಉಳ್ಳ ಗ್ಲಾಸ್, ಸ್ಟೀಲ್, ಪೇಪರ್ ಮತ್ತಿತರ ಪ್ಲಾಸ್ಟಿಕ್ ಅಲ್ಲದ ಲೋಟಗಳಲ್ಲಿ ಸರಬರಾಜು ಮಾಡಲು ಕ್ರಮವಹಿಸುವಂತೆ ಅಧಿಸೂಚನೆ / ಆದೇಶ / ಸುತ್ತೋಲೆ ಹೊರಡಿಸಲಾಗಿದೆ ಎಂದು ಸರ್ಕಾರಿ ಸುತ್ತೋಲೆಯಲ್ಲಿ ತಿಳಿಸಲಾಗಿದೆ.