ಬೆಂಗಳೂರು: ಮೆರವಣಿಗೆ ನಡೆಯುವ ಸಂದರ್ಭದಲ್ಲಿ ಮಸೀದಿ ಕಡೆಯಿಂದ ಕಲ್ಲುಗಳು ಎಸೆದ ಬಗ್ಗೆ ಮಾಹಿತಿ ಇದೆ. ವಿಚಾರಣೆ ನಡೆಸಿ ನಂತರ 21 ಜನರನ್ನು ಬಂಧಿಸಲಾಗಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕಲ್ಲು ತೂರಾಟದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ಪೂರ್ವನಿಯೋಜಿತವಾಗಿ ನಡೆದಿದೆ.ಯಾವ ಹಿಂದೂಗಳ ಮೇಲೂ ಕೇಸ್ ದಾಖಲಾಗಿಲ್ಲ. ಇಷ್ಟು ಬೇಗ ಕ್ರಮ ತೆಗೆದುಕೊಂಡ ಪ್ರಕರಣ ಬೇರೆ ಯಾವುದೂ ಇಲ್ಲ. ಆದರೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪ್ರಚೋದಿಸುತ್ತಿದ್ದಾರೆ. ಇನ್ನಷ್ಟು ಬಿಗಿಕ್ರಮಗಳನ್ನು ತೆಗೆದುಕೊಳ್ಳಲು ಹೇಳಬಹುದಿತ್ತು. ಅದು ಬಿಟ್ಟು ಕೋಮುಗಲಭೆಗೆ ಪ್ರಚೋದನೆ ಕೊಡುವುದು ಸರಿಯಲ್ಲ ಎಂದರು.
ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡಿದ್ದಾರೆ. ಅಶೋಕ್ ಸೇರಿದಂತೆ ಬಿಜೆಪಿ ನಾಯಕರ ಕುಮ್ಮಕ್ಕಿನಿಂದ ಇದೆಲ್ಲ ಆಗುತ್ತಿದೆ. ನನಗೂ ಕೆಲವು ಸಂಘಟನೆಗಳ ಮುಖಂಡರು ಕರೆ ಮಾಡಿ ಮಾತನಾಡಿದ್ದಾರೆ. ಅವರ ಹೆಸರನ್ನ ಈಗ ಹೇಳಲು ಬಯಸುವುದಿಲ್ಲ. ಬಿಜೆಪಿ ನಾಯಕರೇ ಸಂಘಟನೆಗಳ ಮುಖಂಡರಿಗೆ ಕರೆ ಮಾಡಿ ಪ್ರಚೋದನೆ ಕೊಡುತ್ತಿದ್ದಾರೆ. ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಸಹಿಸಲು ಆಗುತ್ತಿಲ್ಲ. ವಿಧಾನಸಭೆಯಲ್ಲಿ ನಮ್ಮನ್ನು ಎದುರಿಸಲು ಅವರಿಗೆ ಆಗಿಲ್ಲ. ಹಾಗಾಗಿ ಇಂತಹ ಘಟನೆಗಳು ನಡೆದಾಗ ಪ್ರಚೋದನೆ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಯಾವುದೇ ಸಮಾಜವಿದ್ದರೂ ಅವರ ಮೇಲೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಬಿಜೆಪಿ, ಜೆಡಿಎಸ್‌ನವರು ರಾಜಕೀಯವಾಗಿ ನಮ್ಮನ್ನು ಎದುರಿಸಲು ಆಗದೇ ಪ್ರಚೋದನೆ ಮಾಡುತ್ತಿದ್ದಾರೆ. ನಾವು ಯಾರ ಓಲೈಕೆಯನ್ನ ಕೂಡ ಮಾಡುತ್ತಿಲ್ಲ. ಹಾಗಿದ್ರೆ ಯಾಕೆ 21 ಜನರ ಬಂಧನ ಮಾಡುತ್ತಿದ್ದೆವು? ಇದು ಪೂರ್ವನಿಯೋಜಿತ, ನಮಗೆ ಎಲ್ಲ ಗೊತ್ತಿದೆ. ಈ ಹಿಂದೆ ಮಂಗಳೂರಿನಿಂದ ಪಾಂಡವಪುರಕ್ಕೆ ಬಂದು ಏನು ನಡೆಸಿದ್ರು ಗೊತ್ತಿದೆ ನಮಗೆ. ನಾಗಮಂಗಲದಲ್ಲೂ ನಡೆಸಿದ್ರು, ಈ ಸಲ ಎಚ್ಚರಿಕೆ ವಹಿಸಿದ್ದೇವೆ ಎಂದು ಹೇಳಿದರು.