ಬೆಂಗಳೂರು: ರಾಜ್ಯ ಸರಕಾರದ ಎಲ್ಲಾಅಧಿಕಾರಿ ಹಾಗೂ ನೌಕರರ ಆಸ್ತಿ ವಿವರಗಳ ಮಾಹಿತಿ ನೀಡಬೇಕು. ಜತೆಗೆ, ಸರ್ಕಾರಿ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲು ಕ್ರಮ ವಹಿಸಲು ಇಲಾಖಾ ಮುಖ್ಯಸ್ಥರಿಗೆ ನಿರ್ದೇಶಿಸಬೇಕು ಎಂದು ಲೋಕಾಯುಕ್ತದಿಂದ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
ಡಿಸೆಂಬರ್ 18ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಲೋಕಾಯುಕ್ತ ರಿಜಿಸ್ಟ್ರಾರ್ ಎಂ. ಚಂದ್ರಶೇಖರ್ ರೆಡ್ಡಿ ಪತ್ರ ಬರೆದಿದ್ದು, ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಸರ್ಕಾರಿ ನೌಕರರು, ಅಧಿಕಾರಿಗಳು ವಿರುದ್ಧ ಲೋಕಾಯುಕ್ತ ಪೊಲೀಸರು ತನಿಖೆ ಆರಂಭಿಸಿದಾಗ ಸಂಬಂಧಿಸಿದ ಇಲಾಖೆಗಳು ಸಕಾಲಕ್ಕೆ ಮಾಹಿತಿ ಒದಗಿಸುವುದಿಲ್ಲ. ಕೆಲವೊಮ್ಮೆ ಸತಾಯಿಸುವದರಿಂದ ತನಿಖೆಗೆ ಅಡಚಣೆಯಾಗುತ್ತಿದೆ. ಇದನ್ನು ತಪ್ಪಿಸಲು ಡಿಜಿಟಲ್ ಸ್ವರೂಪದಲ್ಲಿ ಆಸ್ತಿ ವಿವರ ಸಲ್ಲಿಸುವ ಕ್ರಮ ಕಡ್ಡಾಯಗೊಳಿಸಬೇಕು. ಆ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗದಂತೆ ರಕ್ಷಣಾ ಕ್ರಮ ಕೈಗೊಂಡು ಲೋಕಾಯುಕ್ತರ ಜೊತೆ ಹಂಚಿಕೊಳ್ಳಬೇಕು ಎಂದು ತಿಳಿಸಲಾಗಿದೆ.
ರಾಜ್ಯ ಸರ್ಕಾರಿ ನೌಕರರು ಹಾಗೂ ಅಖಿಲ ಭಾರತ ಸೇವೆಗಳ ನಿಯಮಗಳು 1968ರ (16) ಅನ್ವಯ ಸರ್ಕಾರಿ ನೌಕರರು ನೇಮಕಾತಿ ಹೊಂದಿದ ದಿನದಿಂದಲೇ ಪ್ರತಿ 12 ತಿಂಗಳ ಅವಧಿಯಲ್ಲಿಅವರ ಹಾಗೂ ಕುಟುಂಬದ ಎಲ್ಲಸದಸ್ಯರ ಆಸ್ತಿ ಹಾಗೂ ಹೊಣೆಗಾರಿಕೆ ವಿವರ ಸಲ್ಲಿಸಬೇಕೆಂಬ ನಿಯಮ ಪಾಲಿಸುವಂತಾಗಬೇಕು. ಈ ನಿಯಮ ಪಾಲನೆಯಾಗದಿದ್ದರೆ ಅಧಿಕಾರಿ/ನೌಕರರ ದುರ್ನಡತೆಯಾಗಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.