ಬೆಂಗಳೂರು : ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಪ್ರಯುಕ್ತ ಡಿಸಿಎಂ ಡಿಕೆ ಶಿವಕುಮಾರ್ ಅವರು ಹಲವು ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಪ್ರಾಥಮಿಕ ಶಾಲಾ ಪಠ್ಯಕ್ರಮಕ್ಕೆ ಕೆಂಪೇಗೌಡರ ಬಗ್ಗೆ ಪಾಠ ಸೇರ್ಪಡೆ, ಕೆಂಪೇಗೌಡ ಪ್ರಾಧಿಕಾರ ಸ್ಥಾಪನೆ, ಮತ್ತು ವಿವಿಧ ಗೌರವಗಳನ್ನು ನೀಡುವ ಯೋಜನೆಗಳನ್ನು ತಿಳಿಸಿದ್ದಾರೆ.
ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಪ್ರಯುಕ್ತ ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದರು. ಪ್ರಾಥಮಿಕ ಶಾಲೆಯ ಪಠ್ಯದಲ್ಲಿ ಕೆಂಪೇಗೌಡರ ಕುರಿತು ಒಂದು ಪಾಠ ಸೇರಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸಲಹೆ ನೀಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ನಾಡಪ್ರಭು ಕೆಂಪೇಗೌಡ ಅವರ ಹೆಸರಿನಲ್ಲಿ ಸಂಸ್ಥೆಗಳು ಮತ್ತು ಎಲ್ಲ ವರ್ಗದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಸಂಬಂಧ ಸಮಿತಿ ರಚಿಸಲಾಗುತ್ತದೆ. ಕೆಂಪೇಗೌಡ ಪ್ರಾಧಿಕಾರದ ವತಿಯಿಂದ ಮೈಸೂರು ದಸರಾಕ್ಕೆ ಸ್ತಬ್ಧಚಿತ್ರ ಕಳುಹಿಸಲಾಗುತ್ತದೆ. ಕೆಂಪೇಗೌಡರ ಜಯಂತಿ ಆಚರಿಸಲು ಒಂದು ಲಕ್ಷ ಹಣ ನೀಡಲು ತೀರ್ಮಾನಿಸಲಾಗಿದೆ ಎಂದರು.
ಜೂನ್ 27 ಕೆಂಪೇಗೌಡ ಜನ್ಮದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಬಾಬು ಜಗಜೀವನ್ ರಾಮ್ ಭವನದಲ್ಲಿ ಕಾರ್ಯಕ್ರಮ ನಡೆಯುತ್ತದೆ. ಕೆಂಪೇಗೌಡ ಪ್ರಾಧಿಕಾರ ನಿರ್ಮಾಣಕ್ಕೆ ಸುಮ್ಮನಹಳ್ಳಿಯಲ್ಲಿ ಐದು ಎಕರೆ ಜಮೀನು ಖರೀದಿಸಲಾಗಿದೆ. ಕೆಂಪೇಗೌಡರ ಜಯಂತಿಯಂದೇ ಭೂಮಿ ಪೂಜೆ ನೆರವೇರಿಸಲಾಗುತ್ತದೆ ಎಂದು ಹೇಳಿದರು.