ಬೆಂಗಳೂರು: ರಾಜ್ಯದ ಸರ್ಕಾರಿ ಜಾಗಕ್ಕೂ ಭೂ ಪರಿವರ್ತನೆ ನಿಯಮ ಅನ್ವಯವಾಗಲಿದೆ ಎಂದು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಖಾಸಗಿ ಶಾಲಾ ಸಂಘಟನೆ ಅವರ್ ಸ್ಕೂಲ್ಸ್ ಮಾಹಿತಿ ಹಕ್ಕು ಅಧಿನಿಯಮದಡಿ ಕೇಳಿರುವ ಪ್ರಶ್ನೆಗೆ ಉತ್ತರ ನೀಡಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪ್ರಾಥಮಿಕ) ಅಧೀನ ಕಾರ್ಯದರ್ಶಿ, ಸರ್ಕಾರಿ ಶಾಲೆಗಳ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಭೂಮಿಯನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಎಂದು ಭೂ ಪರಿವರ್ತನೆ ಮಾಡಿಸಬೇಕೆಂಬ ನಿಯಮಕ್ಕೆ ವಿನಾಯಿತಿ ನೀಡಿ ಯಾವುದೇ ಸರ್ಕಾರಿ ಆದೇಶವನ್ನಾಗಲಿ, ಸುತ್ತೋಲೆಯನ್ನಾಗಲಿ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಖಾಸಗಿ ಶಾಲೆಗಳಿಗೆ ಅನ್ವಯಿಸುವಂತೆ ಶಾಲಾ ಜಾಗವನ್ನು ‘ಶೈಕ್ಷಣಿಕ ಉದ್ದೇಶಕ್ಕಾಗಿ’ ಎಂದು ಭೂ ಪರಿವರ್ತನೆ ಮಾಡಿಸಬೇಕೆಂಬ ನಿಯಮ ಸರ್ಕಾರಿ ಶಾಲೆಗಳಿಗೂ ಅನ್ವಯವಾಗಲಿದೆ. ಈ ಮೂಲಕ ಸರ್ಕಾರಿ ಶಾಲೆಗಳ ಜಾಗವನ್ನೂ ಶೈಕ್ಷಣಿಕ ಉದ್ದೇಶಕ್ಕಾಗಿ ಎಂದು ಭೂ ಪರಿವರ್ತನೆ ಮಾಡಿಸುವುದು ಕಡ್ಡಾಯ ಎಂದು ಇಲಾಖೆ ಸ್ಪಷ್ಟಪಡಿಸಿದೆ.