ಬೆಂಗಳೂರು : ಬಗರ್‌ಹುಕುಂ ಅರ್ಜಿಗಳ ವಿಲೇವಾರಿ ಬಡವರ ಕೆಲಸ. ಸಾವಿರಾರು ಬಡವರು ಅರ್ಜಿ ಹಾಕಿ ಕಾದು ಕುಳಿತಿದ್ದಾರೆ. ಕೆಲ ತಹಸೀಲ್ದಾರರು ಅಸಡ್ಡೆ ತೋರುತ್ತಿದ್ದು, ಶೀಘ್ರ ಎಚ್ಚೆತ್ತುಕೊಂಡು ಮುಂದಿನ 6 ತಿಂಗಳ ಒಳಗಾಗಿ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಿ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಾಕೀತು ಮಾಡಿದ್ದಾರೆ.
ಶುಕ್ರವಾರ ವಿಕಾಸ ಸೌಧದಿಂದ ವಿಡಿಯೋ ಕಾನ್ಸರೆನ್ಸ್ ಮೂಲಕ ರಾಜ್ಯದ ಎಲ್ಲಾ ತಹಸೀಲ್ದಾರರ ಜತೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು,ಬಗರ್‌ಹುಕುಂ ಕೆಲಸಗಳಿಗೆ ಚುರುಕು ಮುಟ್ಟಿಸಬೇಕು ಎಂದು ಎರಡು ವರ್ಷದಿಂದಜಿಲ್ಲಾ ಪ್ರವಾಸ ಮಾಡಿ ಪ್ರಗತಿ ಪರಿಶೀಲನೆ ನಡೆಸುತ್ತಿದ್ದೇನೆ. ಆದರೆ ಕೆಲ ಅಧಿಕಾರಿಗಳು ಬಡವರ ಕೆಲಸಕ್ಕೆ ಅಸಡ್ಡೆ ತೋರುತ್ತಿದ್ದಾರೆ ಎಂದರು.
ರಾಜ್ಯದ ಬಹುತೇಕ ಎಲ್ಲಾ ತಾಲೂಕುಗಳಲ್ಲೂ ಬಗರ್ ಹುಕುಂ ಸಮಿತಿ ರಚಿಸಲಾಗಿದ್ದು, ಗ್ರಾಮ ಆಡಳಿತ ಅಧಿಕಾರಿಯಿಂದ ತಹಸೀಲ್ದಾರರ ಎದುರು ಬಂದಿದೆ ಎಂದರೆ ಆ ಅರ್ಜಿ ಬಹುತೇಕ ಅರ್ಹ ಅರ್ಜಿಯೇ ಆಗಿರುತ್ತದೆ. ಹೀಗಾಗಿ ಅಧಿಕಾರಿಗಳು ಪ್ರತಿ 15 ದಿನಗಳಿಗೊಮ್ಮೆ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಸಭೆನಡೆಸಿ ಅರ್ಹರಿಗೆ ಜಮೀನು ಮಂಜೂರು ಮಾಡಿ ಎಂದು ಕೃಷ್ಣಬೈರೇಗೌಡ ಸೂಚಿಸಿದರು.