ಬೆಂಗಳೂರು : ಬೆಂಗಳೂರಲ್ಲಿ ಹಣಕ್ಕಾಗಿ ಸ್ಪಾ ನಡೆಸುತ್ತಿದ್ದ ವ್ಯಕ್ತಿಯನ್ನ ಕಿಡ್ನ್ಯಾಪ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಜಿಗಣಿ ಮೂಲದ ಅಕ್ಷಯ್, ಜಿಗಣಿ ಮಂಟಪ ಗ್ರಾಮದ ಮಂಜುನಾಥ್ ಮತ್ತು ಆನೇಕಲ್ ತಾಲ್ಲೂಕಿನ ಹೊಂಪಲಘಟ್ಟ ಮೂಲದ ಪ್ರಜ್ವಲ್ ಬಂಧಿತರು ಎಂದು ತಿಳಿದುಬಂದಿದೆ.
ಪ್ರಕರಣ ಹಿನ್ನೆಲೆ
ಆರೋಪಿ ಮಂಜುನಾಥ್ ಅಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡುತ್ತಿದ್ದ. ಅಪಾರ್ಟ್ಮೆಂಟ್ನ ಹಣವನ್ನ ದುರ್ಬಳಕೆ ಮಾಡಿಕೊಂಡಿದ್ದ. ಬಳಿಕ ಹಣ ಹೊಂದಿಸಲು ಪ್ರಜ್ವಲ್ ಮತ್ತು ಅಕ್ಷಯ್ ಬಳಿ ಸಹಾಯ ಕೇಳಿದ್ದ. ಮೂರು ಜನ ಸೇರಿ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದರು. ಸ್ಪಾ ಮಾಲೀಕರ ಬಳಿ ಹಣ ಇರುತ್ತೆ ಅಂತ ಕಿಡ್ನ್ಯಾಪ್ ಮಾಡುವುದಕ್ಕೆ ಹೊಂಚು ಹಾಕಿದ್ದರು. ಅದರಂತೆಯೇ ಸ್ಪಾ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಅಶೀತ್ ಜ್ಹಾ, ಮನ್ನುಕುಮಾರ್ರನ್ನ ಹಿಂಬಾಲಿಸಿ ಅಶೀತ್ರನ್ನ ಕಿಡ್ನ್ಯಾಪ್ ಮಾಡಿದ್ದರು. ಬಳಿಕ ಎರಡು ಲಕ್ಷ ರೂ ಹಣಕ್ಕೆ ಬೇಡಿಕೆಯಿಟ್ಟಿದ್ದರು.
ಇನ್ನು ಕಿಡ್ನ್ಯಾಪ್ ಆಗಿದ್ದ ಅಶೀತ್ ಮಾತನಾಡಿದ್ದು, ಸ್ಪಾ ಕೆಲಸ ಮುಗಿಸಿಕೊಂಡು ಬೈಕ್ನಲ್ಲಿ ಬರುತ್ತಿದ್ದೇವು. ಬೆಟ್ಟದಾಸನಪುರ ಬಳಿ ಕಾರಿನಲ್ಲಿ ಬೈಕ್ ಡಿಕ್ಕಿ ಹೊಡೆದರು. ಏಕಾಏಕಿ ಲಾಂಗ್ನಿಂದ ಹಲ್ಲೆ ಮಾಡಿದರು. ಮುಖ ಮತ್ತು ಕಾಲಿಗೆ ಹಲ್ಲೆ ನಡೆಸಿ ಕಿಡ್ನ್ಯಾಪ್ ಮಾಡಿದರು. ಜೊತೆಯಲ್ಲಿದ್ದ ಮನ್ನುಕುಮಾರ್ನನ್ನ ಕಿಡ್ನ್ಯಾಪ್ ಮಾಡಲು ನೋಡಿದರು, ಆಗ ರಸ್ತೆಯಲ್ಲಿ ಯಾವುದೋ ವಾಹನ ಬಂದಿದ್ದರಿಂದ ಆತನನ್ನ ಬಿಟ್ಟು ನನ್ನ ಕಿಡ್ನ್ಯಾಪ್ ಮಾಡಿದರು ಎಂದು ಮಾಹಿತಿ ನೀಡಿದರು.
ಲೊಕೇಶನ್ ಆಧರಿಸಿ ಆರೋಪಿಗಳನ್ನ ಬಂಧಿಸಲಾಗಿದೆ. ಆರೋಪಿ ಅಕ್ಷಯ್ ಈ ಹಿಂದೆ ಕೊಲೆ ಕೇಸ್ನಲ್ಲಿ ಭಾಗಿಯಾಗಿದ್ದ. ಆರೋಪಿ ಪ್ರಜ್ವಲ್ಗೆ ಕೂಡ ಕ್ರಿಮಿನಲ್ ಬ್ಯಾಗ್ರೌಂಡ್ ಇದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ 01 ಕಾರು, 1 ಲಾಂಗ್, 2 ಡ್ರಾಗರ್ 03 ಮೊಬೈಲ್ ಫೋನ್ ಮತ್ತು 9,700 ರೂ. ಹಣ ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಭೇದಿಸಿದ ಪೊಲೀಸರಿಗೆ ರಿವಾರ್ಡ್ ನೀಡಲಾಗುತ್ತೆ ಎಂದು ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ಹೇಳಿದ್ದಾರೆ.








