ಬೆಂಗಳೂರು : ಪ್ರಸ್ತುತ ಕರ್ನಾಟಕದಲ್ಲಿ ಪೊಲೀಸರು ಬ್ರಿಟಿಷರ ಕಾಲದ ಟೋಪಿಗಳನ್ನೇ ಬಳಸುತ್ತಿದ್ದಾರೆ. ಈ ಒಂದು ಟೋಪಿ ಬದಲಾವಣೆಗಾಗಿ ಮೊದಲಿನಿಂದಲೂ ಕೂಗು ಕೇಳಿ ಬಂದಿತ್ತು. ಆದರೆ ಇದೀಗ ದೊಡ್ಡ ಟೋಪಿ ಬದಲಾಗಿ ಸ್ಮಾರ್ಟ್ ಪೀಕ್ ಹ್ಯಾಟ್ ಹೆಡ್ ಕಾನ್‌ಸ್ಟೆಬಲ್ ಹಾಗೂ ಕಾನ್ ಸ್ಟೆಬಲ್ಗಳ ತಲೆಯನ್ನು ಅಲಂಕರಿಸಲಿದೆ. ಇಂತಹದೊಂದು ಸಾಹಸಕ್ಕೆ ಪೊಲೀಸ್ ಇಲಾಖೆ ದಿಟ್ಟ ಹೆಜ್ಜೆಯಿಟ್ಟಿದೆ.
ಹೌದು ಕರ್ನಾಟಕ ಪೊಲೀಸ್ ಇಲಾಖೆಯ ಹೆಡ್ ಕಾನ್‌ಸ್ಟೆಬಲ್ ಮತ್ತು ಕಾನ್‌ಸ್ಟೆಬಲ್‌ಗಳು ಬಹಳ ವರ್ಷಗಳಿಂದ ಬ್ರಿಟಿಷ್ ಕಾಲದ ಟೋಪಿಗಳನ್ನು ಧರಿಸುತ್ತಿದ್ದಾರೆ. ಇದು ಆರೋಗ್ಯ ಮತ್ತು ಇತರೆ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಹೊಸ ಪೀಕ್ ಕ್ಯಾಪ್‌ಗಳನ್ನು ನೀಡಲು ಪೊಲೀಸ್ ಇಲಾಖೆ ಮುಂದಾಗಿದೆ. ಈ ಬಗ್ಗೆ ಏಪ್ರಿಲ್ 4ರಂದು ಸಭೆ ನಡೆಯಲಿದೆ.
ಪ್ರಸ್ತುತ ಪೊಲೀಸ್ ಕಾನ್‌ಸ್ಟೆಬಲ್‌ಗಳು ಧರಿಸುತ್ತಿರುವ ಗ್ಲೋಚ್ ಟೋಪಿಯಿಂದಾಗಿ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಗಳ ಬಗ್ಗೆ ಇತ್ತೀಚೆಗೆ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿತ್ತು. ಇನ್ನು ಕೇರಳ, ಆಂಧ್ರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಅಲ್ಲಿನ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಹಾಗೂ ಕಾನ್‌ಸ್ಟೆಬಲ್‌ಗಳಿಗೆ ಪೀಕ್ ಕ್ಯಾಪ್‌ಗಳನ್ನು ನೀಡಲಾಗಿದೆ. ಸದ್ಯ ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ ನೀಡುವ ಕುರಿತಾಗಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಡಿಜಿ-ಐಜಿಪಿ ಡಾ. ಅಲೋಕ್ ಮೋಹನ್ ಸೂಚಿಸಿದ್ದಾರೆ.
ಅನಾದಿ ಕಾಲದಿಂದಲೂ ಬಳಸಿಕೊಂಡು ಬರುತ್ತಿರುವ ಟೋಪಿಯಿಂದ ಸಮಸ್ಯೆ ಜಾಸ್ತಿ ಎನ್ನಲಾಗುತ್ತಿದೆ. ರ್ಯಾಲಿ, ಪ್ರತಿಭಟನೆ ಅಥವಾ ಲಾಟಿ ಚಾರ್ಜ್ ಸಂದರ್ಭಗಳಲ್ಲಿ ಕಿರಿಕಿರಿ ಉಂಟಾಗುತ್ತಿದೆ. ತಲೆ ಮೇಲೆ ಸರಿಯಾಗಿ ನಿಲ್ಲಲ್ಲ. ಒಂದು ವೇಳೆ ಓಡುವಾಗ ಕೆಳಗೆ ಬಿದ್ದರೆ ಸಾರ್ವಜನಿಕವಾಗಿ ಅವಮಾನವಲ್ಲದೇ, ಇಲಾಖೆ ಸಮವಸ್ತ್ರಕ್ಕೆ ಅಗೌರವ ತೋರಿದಂತಾಗುತ್ತದೆ. ಹಾಗಾಗಿ ಟೋಪಿ ಬದಲಾವಣೆಗೆ ಅನೇಕ ವರ್ಷಗಳಿಂದ ಪೊಲೀಸರು ಬೇಡಿಕೆ ಇಡುತ್ತಿದ್ದರೂ ಈಡೇರಿರಲಿಲ್ಲ.ಇದೀಗ ಡಿಜಿ-ಐಜಿಪಿ ಸೂಚನೆ ಬೆನ್ನಲ್ಲೇ ಪೀಕ್ ಟೋಪಿ ವಿತರಣೆ ಬಗ್ಗೆ ಚರ್ಚಿಸಲು ರಾಜ್ಯ ಸಶಸ್ತ್ರ ಮೀಸಲು ಪಡೆ (ಕೆಎಸ್ಆರ್ಪಿ) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಅಧ್ಯಕ್ಷತೆಯಲ್ಲಿ ಏಪ್ರಿಲ್ 4ರಂದು ಕಿಟ್ ನಿರ್ದಿಷ್ಟತಾ ಸಮಿತಿ ಸಭೆ ಕರೆಯಲಾಗಿದೆ.