ಬೆಂಗಳೂರು: ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಮತ್ತು ವನ್ಯಜೀವಿ ಅಭಯಾರಣ್ಯಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಮ್ಮನ್ನು ಭೇಟಿಯಾದ ಕೇರಳ ಸಿಎಂಗೆ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭಾನುವಾರ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ನಿರ್ಧರಿಸಿದಂತೆ ವಿಜಯನ್ ಅವರು ದ್ವಿಪಕ್ಷೀಯ ಮಾತುಕತೆ ನಡೆಸಲು ರಾಜ್ಯಕ್ಕೆ ಬಂದಿದ್ದರು ಎಂದು ಹೇಳಿದರು. ಕೇರಳ ಸರ್ಕಾರವು ಕಾಞಂಗಾಡ್-ಕಾಣಿಯೂರು ರೈಲು ಮಾರ್ಗ ಮತ್ತು ಇತರ ಹೆದ್ದಾರಿ ಯೋಜನೆಗಳು ಸೇರಿದಂತೆ ತನ್ನ ವಿವಿಧ ರೈಲ್ವೆ ಯೋಜನೆಗಳಿಗೆ ಸಹಕಾರವನ್ನು ಕೋರಿತು ಅಂತ ತಿಳಿಸಿದರು.
ಇದೇ ವೇಳೆ ಅವರು ಉದ್ದೇಶಿತ ಕಾಞಂಗಾಡ್-ಕಾಣಿಯೂರು ರೈಲು ಮಾರ್ಗ ಯೋಜನೆಯು ಕೇರಳದಲ್ಲಿ 40 ಕಿ.ಮೀ ಮತ್ತು ಕರ್ನಾಟಕದಲ್ಲಿ 31 ಕಿ.ಮೀ ಮಾರ್ಗವನ್ನು ಹೊಂದಿದೆ. ಆದಾಗ್ಯೂ, ಈ ಯೋಜನೆಯು ಕರ್ನಾಟಕಕ್ಕೆ ಹೆಚ್ಚು ಪ್ರಯೋಜನಕಾರಿಯಲ್ಲ ಎಂದು ಕರ್ನಾಟಕದ ಮುಖ್ಯಮಂತ್ರಿ ಸ್ಪಷ್ಟಪಡಿಸಲಾಗಿದ್ದು, ಇದಲ್ಲದೆ, ಇದು ಪಶ್ಚಿಮ ಘಟ್ಟಗಳ ಶ್ರೀಮಂತ ಜೀವವೈವಿಧ್ಯತೆ ಮತ್ತು ಪರಿಸರ ಸೂಕ್ಷ್ಮ ಪ್ರದೇಶಗಳ ಮೂಲಕ ಹಾದುಹೋಗುತ್ತದೆ ಎಂದು ಅವರು ಹೇಳಿದರು. “ಆದ್ದರಿಂದ, ಈ ಯೋಜನೆಗೆ ಕರ್ನಾಟಕ ರಾಜ್ಯವು ವಿಸ್ತೃತ ಸಹಕಾರವನ್ನು ನೀಡಲು ಸಾಧ್ಯವಿಲ್ಲ ಎಂದು ಕೇರಳ ಸಿಎಂಗೆ ಸ್ಪಷ್ಟವಾಗಿ ತಿಳಿಸಲಾಗಿದೆ” ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.