ಬೆಂಗಳೂರು : ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದು, ಈ ವರ್ಷದ ಜನವರಿಯಿಂದ ಏಪ್ರಿಲ್ 30ರವರೆಗೆ ಸುಮಾರು 430 ಕೊಲೆಗಳು ಹಾಗೂ 198 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ.
ಕೊಲೆ, ಅತ್ಯಾಚಾರ, ಮಹಿಳೆಯರು ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಸೈಬರ್ ಕ್ರೈಂ ಹಾಗೂ ಇತರೆ ಪ್ರಕಾರದ ಅಪರಾಧಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಅಂಕಿ-ಅಂಶಗಳಿಂದ ತಿಳಿದುಬಂದಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ -ಎನ್.ಸಿ.ಆರ್.ಬಿ. ಮಾಹಿತಿ ಪ್ರಕಾರ, ಅತ್ಯಾಚಾರ, ಮಹಿಳೆಯರು ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಸೈಬರ್ ಕ್ರೈಂ ಅಪರಾಧ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. 2024ರ ಜನವರಿಯಿಂದ ಏಪ್ರಿಲ್ 30ರವರೆಗೆ 198 ಅತ್ಯಾಚಾರ, 2327 ಮಹಿಳೆಯರ ಮೇಲೆ ದೌರ್ಜನ್ಯ, 1262 ಮಕ್ಕಳ ಮೇಲೆ ದೌರ್ಜನ್ಯ, 6063 ಹಲ್ಲೆ ಪ್ರಕರಣ, 7421 ಸೈಬರ್ ಕ್ರೈಂ, 2243 ವಂಚನೆ ಪ್ರಕರಣ, 450ಕ್ಕೂ ಅಧಿಕ ಸುಲಿಗೆ ಪ್ರಕರಣಗಳು ದಾಖಲಾಗಿವೆ.
ಇತ್ತೀಚಿನ ದಿನಗಳಲ್ಲಿ ಯುವತಿಯರನ್ನು ಗುರಿಯಾಗಿಸಿಕೊಂಡು ಕೊಲೆ ಹಾಗೂ ಹಲ್ಲೆಯಂಥ ಘಟನೆಗಳು ನಡೆಯುತ್ತಿದ್ದು ಇದರಿಂದ ಪೋಷಕರು ಆತಂಕಗೊಂಡಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ.