ನವದೆಹಲಿ : ಹಾಸನದಲ್ಲಿ ಕಾಂಗ್ರೆಸ್ ಪಕ್ಷದಿಂದ ಜನಕಲ್ಯಾಣ ಸಮಾವೇಶ ಮಾಡುತ್ತಿರುವ ವಿಚಾರವಾಗಿ, ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದು,ಕಾಂಗ್ರೆಸ್ನವರು ಎಷ್ಟು ಸಮಾವೇಶಗಳನ್ನು ಮಾಡುತ್ತಾರೋ ಮಾಡಲಿ ಆದರೆ 2028 ರಲ್ಲಿ ಎಚ್ ಡಿ ದೇವೇಗೌಡ ಹಾಗೂ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದರು.
ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನವರು 10 ಸಮಾವೇಶ ಮಾಡಲಿ ನಾವು ಹೆದರುವುದಿಲ್ಲ. ಹಾಸನ ಜಿಲ್ಲೆಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಏನು? ಸಿದ್ದರಾಮಯ್ಯ ಈ ಹಿಂದೆ ಸಿಎಂ ಆಗಿದ್ದಾಗಲೂ ಕ್ಷೇತ್ರಕ್ಕೆ ಏನು ಮಾಡಿಲ್ಲ. ಕಾಂಗ್ರೆಸ್ ನವರಿಗೆ ಹಾಸನದಲ್ಲಿ ಒಂದು ಫ್ಲೈ ಓವರ್ ಮಾಡಲು ಆಗಿಲ್ಲ. ಹಾಸನಕ್ಕೆ ಮಂಜೂರಾಗಿದ್ದ ರೈಲ್ವೆ ಯೋಜನೆಯನ್ನು ಸಹ ತಡೆದಿದ್ದಾರೆ ಅಧಿಕಾರದಲ್ಲಿರುವ ಕಾಂಗ್ರೆಸ್ ಹಾಸನದ ಅಭಿವೃದ್ಧಿಗೆ ಕೆಲಸ ಮಾಡಲಿ ಎಂದರು.
ಅಧಿಕಾರ ಇಲ್ಲದಾಗ ಕೈಕಾಲು ಹಿಡಿದುಕೊಳ್ಳುತ್ತಾರೆ. ಕಳೆದ 2018 ರಲ್ಲಿ ನಮ್ಮ ಪಕ್ಷದ ಶಾಸಕರನ್ನು ಕರೆದುಕೊಂಡು ಹೋದರು. ಆಮೇಲೆ ಬಂದು ಕಾಂಗ್ರೆಸ್ನವರು ನಮ್ಮ ಕೈ ಕಾಲು ಹಿಡಿದರು. ದೇವೇಗೌಡರು ಕುಮಾರಸ್ವಾಮಿ ಕೈಕಾಲು ಹಿಡಿದು ಅಧಿಕಾರಕ್ಕೆ ಬಂದರು. ಅಧಿಕಾರ ಬೇಕಾದಾಗ ಬಂದು ತಬ್ಬಿ ಕೊಳ್ಳುತ್ತಾರೆ. ಬೇಡವಾದಾಗ ದೂರ ತಳ್ಳುತ್ತಾರೆ ಅಧಿಕಾರದಲ್ಲಿದ್ದಾಗ ಯಾಕೆ ಸಮಾವೇಶಗಳನ್ನು ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಜನರ ಹಣ ಲೂಟಿ ಮಾಡಿ ಈ ಸಮಾವೇಶ ನಡೆಸುತ್ತಿದ್ದಾರೆ.ರಾಜ್ಯದ ಜನರಿಗೆ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಗೊತ್ತಾಗಿದೆ. ಹಾಸನದಲ್ಲಿ ನಮ್ಮನ್ನು ಖಾಲಿ ಮಾಡಿಸುವುದು ಜನ ಹಾಗೂ ದೇವರ ಕೈಯಲ್ಲಿದೆ. ಜೆಡಿಎಸ್ ಪಕ್ಷವನ್ನು ಖಾಲಿ ಮಾಡಿಸಲು ಇವರ್ಯಾರು? ಕಾಂಗ್ರೆಸ್ ಏನೆಲ್ಲಾ ಸಮಾವೇಶಗಳನ್ನು ಮಾಡುತ್ತೋ ಮಾಡಲಿ. 2028ಕ್ಕೆ ರಾಜ್ಯದಲ್ಲಿ ಜೆಡಿಎಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ದೇವೇಗೌಡರು ಕುಮಾರಸ್ವಾಮಿ ನೇತೃತ್ವದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ಶಾಸಕ ಎಚ್ ಡಿ ರೇವಣ್ಣ ತಿಳಿಸಿದರು.








