ರಾಯಚೂರು : ಪ್ರೌಢಶಾಲೆ ನಿರ್ಮಾಣವಾಗಬೇಕಿದ್ದ ಜಾಗದಲ್ಲಿ ಅಕ್ರಮವಾಗಿ ಸಿಎ ಸೈಟ್ನಲ್ಲಿ ನಿರ್ಮಿಸಿದ್ದ ಶಿವ ಹಾಗೂ ಗಣೇಶನ ದೇವಸ್ಥಾನ ನಿರ್ಮಾಣ ಮಾಡಿದ್ದಕ್ಕೆ ರಾತ್ರೋರಾತ್ರಿ ಬುಲ್ಡೋಜರ್ ಬಂದು ಪೊಲೀಸರ ಬಿಗಿ ಭದ್ರತೆಯಲ್ಲಿ ಎರಡು ದೇವಸ್ಥಾನಗಳನ್ನು ತೆರವುಗೊಳಿಸಿರುವ ಘಟನೆ ರಾಯಚೂರು ನಗರದ ಸಂತೋಷ ನಗರದಲ್ಲಿ ನಡೆದಿದೆ.
ಹೌದು ನಿನ್ನೆ ರಾತ್ರಿ ಈ ಒಂದು ತೆರವು ಕಾರ್ಯಾಚರಣೆ ನಡೆದಿದ್ದು, ಅಕ್ರಮವಾಗಿ ಸಿಎ ಸೈಟ್ನಲ್ಲಿ ನಿರ್ಮಿಸಿದ್ದ ಶಿವ ಮತ್ತು ಗಣೇಶನ ಗುಡಿಗಳನ್ನು ನಿನ್ನೆ ರಾತ್ರಿ ತೆರವು ಮಾಡಲಾಗಿದೆ. ರಾಯಚೂರು ಎಸಿ ಗಜಾನನ ಬಾಳೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು, ಜೆಸಿಬಿಗಳ ಮೂಲಕ ಗುಡಿಗಳನ್ನು ಧ್ವಂಸಗೊಳಿಸಲಾಗಿದೆ. ಮನೆ ಕಟ್ಟುವ ವೇಳೆ ಸಿಮೆಂಟ್ ಹಾಗೂ ಇತರೆ ಸಾಮಾಗ್ರಿಗಳು ಇಡಲು ಕಟ್ಟಲಾಗಿದ್ದ ಶೆಡ್ ಅನ್ನೇ ಗುಡಿ ಮಾಡಿಕೊಂಡು ಕೆಲ ಸ್ಥಳೀಯರು ಪೂಜೆ ಸಲ್ಲಿಸುತ್ತಿದ್ದರು.
2022ಜೂನ್ 1ರಂದು ಪ್ರೌಢಶಾಲೆ ಕಟ್ಟಡಕ್ಕೆ ಜಾಗ ಮಂಜೂರಾಗಿತ್ತು. ಜಾಗ ಮಂಜೂರು ಆದ ಬಳಿಕ ನಾಲ್ಕು ಕೊಠಡಿ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿತ್ತು. ಶಾಲೆ ಕಟ್ಟಡಕ್ಕೆ ಅನುದಾನ ಬಿಡುಗಡೆ ಆಗಿದ್ದರೂ ಸ್ಥಳೀಯರಿಂದ ಗುಡಿಗಳ ತೆರವಿಗೆ ವಿರೋಧ ವ್ಯಕ್ತವಾಗಿದೆ. ಸ್ಥಳೀಯರ ವಿರೋಧ ನಡುವೆಯೂ ಪೊಲೀಸ್ ಭದ್ರತೆಯಲ್ಲಿ ಗುಡಿಗಳ ತೆರವು ಕಾರ್ಯ ನಡೆದಿದೆ. ನಗರಸಭೆ ಪೌರಾಯುಕ್ತ, ಹೆಚ್ಚುವರಿ ಎಸ್ಪಿ ಶಿವಕುಮಾರ್ ಮತ್ತು ಹರೀಶ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಪೊಲೀಸರ ಭದ್ರತೆಯಲ್ಲಿ ಗುಡಿಗಳನ್ನು ತೆರವು ಮಾಡಲಾಯಿತು