ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಸರ್ಕಾರದ ಸಚಿವರುಗಳು ವಿಧಾನಸೌಧದಲ್ಲೇ 60% ಕಮಿಷನ್ ಪಡೆಯುತ್ತಿದ್ದಾರೆ ಎಂದು ಗಂಭೀರವಾದ ಆರೋಪ ಮಾಡಿದ್ದರು. ಇದೀಗ ಇವರ ಒಂದು ಆರೋಪಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಧ್ವನಿಗೂಡಿಸಿದ್ದು, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಯನ್ನು ನಾನು ಸಮರ್ಥನೆ ಮಾಡಿಕೊಳ್ಳುತ್ತೇನೆ. 60% ಪಡೆಯುತ್ತಿರುವುದು ನಿಜ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಮಿಷನ್ಗಾಗಿ ಕಾಂಗ್ರೆಸ್ ರಾಜ್ಯವನ್ನು ಲೂಟಿ ಮಾಡಿದೆ. ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ ಅಂತ ಶಾಸಕ ಹಿಟ್ನಾಳ್ ಹೇಳಿದ್ದಾರೆ. ಓಟ್ ಹಾಕುವಾಗ ಅಡ್ಜಸ್ಟ್ ಮಾಡಿಕೊಳ್ಳಿ ಅಂತ ಹೇಳಬೇಕಿತ್ತು. ಕಾಂಗ್ರೆಸ್ ಶಾಸಕ ರಾಜು ಕಾಗೆ ಪ್ರತಿದಿನವೂ ಕೂಗುತ್ತಿದ್ದಾರೆ. ಅಭಿವೃದ್ಧಿ ಕುಂಠಿತ ಆಗಿದೆ ಎಂದು ಕಾಂಗ್ರೆಸ್ ಶಾಸಕರು ಹೇಳುತ್ತಿದ್ದಾರೆ. ಶೇಕಡ 5ರಷ್ಟು ಕಮಿಷನ್ ಜಾಸ್ತಿ ಮಾಡಲು ಕಾಂಗ್ರೆಸ್ ಹೊರಟಿದೆ.
ಮುಂದಿನ ದಿನಗಳಲ್ಲಿ ಮತ್ತಷ್ಟು ಕಮಿಷನ್ ಹೆಚ್ಚಾಗಲಿದೆ. ಗುತ್ತಿಗೆದಾರರ ಆತ್ಮಹತ್ಯೆಗೆ ಅರ್ಜಿ ಹಾಕಿಕೊಳ್ಳುವ ಕಾಲ ಬಂದಿದೆ. ರಾಜ್ಯಪಾಲರಿಗೆ ಗುತ್ತಿಗೆದಾರರು ದಯಾಮರಣ ಕೋರಿ ಪತ್ರ ಬರೆದಿದ್ದಾರೆ. 60% ಕಮಿಷನ್ ಆರೋಪಕ್ಕೆ ಸಿಎಂ ದಾಖಲೆ ಕೇಳುತ್ತಿದ್ದಾರೆ. ಇದೇ 40% ಕಮಿಷನ್ ಆರೋಪಕ್ಕೆ ಅವರು ದಾಖಲೆ ಕೊಟ್ರಾ ಇದು ಯಾವ ನ್ಯಾಯ ಇದು 60% ಲೂಟಿಯ ಸರ್ಕಾರ. ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿಕೆಯನ್ನು ನಾನು ಸಮರ್ಥನೆ ಮಾಡಿಕೊಳ್ಳುತ್ತೇನೆ ಎಂದು ಆರ್ ಅಶೋಕ್ ತಿಳಿಸಿದರು.
ಕಾಂಗ್ರೆಸ್ ನಲ್ಲಿ ಸಾಲು ಸಾಲು ಡಿನ್ನರ್ ಮೀಟಿಂಗ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಆರ್ ಅಶೋಕ್ ಒದ್ದು ಕಿತ್ತು ಕೊಳ್ಳುತ್ತೇನೆ ಅಂತ ಡಿಸಿಎಂ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ. ಸಿದ್ದರಾಮಯ್ಯಗೆ ಈ ಡಿನ್ನರ್ ಫೇರ್ವೆಲ್ ಪಾರ್ಟಿ ಇದ್ದಂತೆ. ಮೇಯರ್ ಅವಧಿ ಮುಗಿದ ಮೇಲೆ ಬೀಳ್ಕೊಡುಗೆ ಇಟ್ಟುಕೊಳ್ಳುತ್ತಿದ್ದೇವೆ. ಆ ರೀತಿ ಆಗಿದೆ ಇವರ ಡಿನ್ನರ್ ಮೀಟಿಂಗ್. ಡಿಕೆ ಶಿವಕುಮಾರ್ ಯಾವಾಗ ಡಿನ್ನರ್ ಹಾಕಿಸುತ್ತಾರೆ ಯಾವಾಗ ಈ ಸರ್ಕಾರ ಬೀಳುತ್ತೋ. 20 ಬಾರಿ ನಾನೇ ಮುಖ್ಯಮಂತ್ರಿ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಎಸ್ಎಂ ಕೃಷ್ಣ ಸಿಎಂ ಆಗಿದಾಗ ಈ ರೀತಿ ಪದೇಪದೇ ಹೇಳುತ್ತಿರಲಿಲ್ಲ ಎಂದು ಆರ್ ಅಶೋಕ್ ತಿಳಿಸಿದರು.
ಕೋವಿಡ್ ಕಷ್ಟ ಕಾಲದಲ್ಲಿ ಬಿಜೆಪಿ ಬಸ್ ಟಿಕೆಟ್ ಪ್ರಯಾಣದ ದರ ಹೆಚ್ಚಿಸಿಲ್ಲ ಕಾಂಗ್ರೆಸ್ ಸರ್ಕಾರ ಈಗ ಏಕಾಏಕಿ ಟಿಕೆಟ್ ದರ ಹೆಚ್ಚಳ ಮಾಡಿದೆ. ಗ್ಯಾರಂಟಿ ಗಳಿಂದಲೇ ಬಸ್ ಟಿಕೆಟ್ ದರ ಏರಿಕೆಯಾಗಿದೆ. ರಾಜ್ಯ ಸರ್ಕಾರದವರು ಕಾಂಗ್ರೆಸ್ ಪಕ್ಷಕ್ಕೆ ಆಫೀಸ್ ಮಾಡಿಕೊಟ್ಟಿದ್ದಾರೆ.ಕಚೇರಿಗೆ ಸುಣ್ಣ ಬಣ್ಣ ಬಳಿಸುತ್ತಿದ್ದಾರೆ ಇದಕ್ಕೆ ದರ ಏರಿಕೆ ಮಾಡುತ್ತಿದ್ದಾರೆ. ಇದನ್ನೆಲ್ಲ ತಪ್ಪಿಸಿದರೆ 15% ಅಲ್ಲ 5% ಮಾಡಬಹುದಿತ್ತು ಎಂದು ಸರ್ಕಾರದ ವಿರುದ್ಧ ಆರ್ ಅಶೋಕ್ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಇಬ್ಬರು ಮಕ್ಕಳಿಗೆ ಎಚ್‌ಎಮ್‌ಪಿ ವೈರಸ್ ಪತ್ತೆಯಾಗಿರುವ ಕುರಿತು ಯಾರು ನಿರ್ಲಕ್ಷ ಮಾಡಬಾರದು. ವೈರಸ್ ಮಾರಣಾಂತಿಕವಾಗಿದೆ. ಹಿಂದೆ ಕೊರೋನಾ ವೈರಸ್ ಪತ್ತೆಯಾಗಿದ್ದೆ ಚೀನಾ ದೇಶದಲ್ಲಿ. ಈಗ ಅದೇ ದೇಶದಲ್ಲಿ HMPV ವೈರಸ್ ಕಾಣಿಸಿಕೊಳ್ಳುತ್ತಿದೆ.ನಮ್ಮ ರಾಜ್ಯದಲ್ಲಿ ಆಸ್ಪತ್ರೆಗಳಿಗೆ ಸೌಕರ್ಯವನ್ನು ಒದಗಿಸಬೇಕು. ಆಕ್ಸಿಜನ್ ಲಭ್ಯತೆ ಬಗ್ಗೆ ಪರಿಶೀಲಿಸಿ ಬೆಡ್‌ಗಳನ್ನು ಹೆಚ್ಚಿಸಬೇಕು. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಕೂಡ ಬೆಡ್‌ಗಳನ್ನು ಹೆಚ್ಚಳ ಮಾಡಬೇಕು ಎಂದು ಆರ್ ಅಶೋಕ್ ಆಗ್ರಹಿಸಿದರು.
ಟಾಸ್ಕ್ ಫೋರ್ಸ್ ರಚನೆ ಮಾಡಲ್ಲ ಎಂಬ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆಗೆ ಯುದ್ಧ ಬಂದಾಗ ಕತ್ತಿ ಎತ್ತಿಕೊಂಡು ಹೋಗುವುದಲ್ಲ. ಟಾಸ್ಕ್ ಫೋರ್ಸ್ ರಚನೆ ಮಾಡುವುದು ಸೂಕ್ತ. ಇಲಾಖೆಯ ಅಧಿಕಾರಿಗಳು ಖಾಲಿ ಕೂತಿದ್ದಾರೆ.ಪೂರ್ವ ಸಿದ್ಧತೆ ಆಗಬೇಕು. ಎಷ್ಟು ಆಕ್ಸಿಜನ್ ಬೆಡ್ ಕಾರ್ಯ ನಿರ್ವಹಿಸುತ್ತಿದೆ ಅಂತ ಮಾಹಿತಿ ಪಡೆದುಕೊಳ್ಳಬೇಕು. ಸಾಲ ತೆಗೆದುಕೊಳ್ಳುವ ಸ್ಥಿತಿ ಇಲ್ಲ ಎಲ್ಲವೂ ಮುಗಿದು ಹೋಗಿದೆ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದರು.