ಬೆಳೆ ಕಟಾವು ಪ್ರಯೋಗ ಹಾಗೂ ಜನನ-ಮರಣ ನೋಂದಣಿ ಕಾರ್ಯ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ತೋರುವ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ “ಕೃಷಿ ಅಂಕಿ ಅಂಶಗಳ ಎರಡನೇ ತ್ರೈಮಾಸಿಕ ಸಭೆ” ಹಾಗೂ “ನಾಗರಿಕ ನೋಂದಣಿ ಪದ್ಧತಿ” ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಯಕ್ಕೆ ಸರಿಯಾಗಿ ಕಟಾವು ಪ್ರಯೋಗ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿ ರೈತರಿಗೆ ಸಮಸ್ಯೆ ಅಥವಾ ನಷ್ಟ ಉಂಟಾದರೆ ಸಂಬಂಧಪಟ್ಟವರಿಂದಲೇ ನಷ್ಟ ಭರಿಸಲು ಕ್ರಮ ಕೈಗೊಳ್ಳಲಾಗುವುದು. ನಿಯೋಜಿಸಿದ ಅಧಿಕಾರಿಗಳೇ ಖುದ್ದಾಗಿ ಜಮೀನುಗಳಿಗೆ ಭೇಟಿ ನೀಡಿ, ಬೆಳೆ ಕಟಾವು ಪ್ರಯೋಗ ನಡೆಸಬೇಕು. ಈ ಹಿಂದೆ ಬೆಳೆ ಕಟಾವು ಪ್ರಯೋಗದಲ್ಲಿ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಚಳ್ಳಕೆರೆ ತಾಲ್ಲೂಕಿನಲ್ಲಿ ಈ ಹಿಂದೆ ಅಕ್ರಮವಾಗಿ ಬೆಳೆ ಪರಿಹಾರ ಧನವನ್ನು ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಪೊಲೀಸ್ ದೂರು ದಾಖಲಾಗಿದೆ. ಪ್ರಕರಣದ ತನಿಖೆಗೆ ಸಮಿತಿ ನೇಮಿಸಲಾಗಿದೆ. ವರದಿ ಆಧರಿಸಿ ಶೀಘ್ರದಲ್ಲೇ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಆಗಲಿದೆ. ತಹಶೀಲ್ದಾರ್ ಹಾಗೂ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಬೆಳೆ ಕಟಾವು ಪ್ರಯೋಗದ ಕುರಿತು ತಮ್ಮ ಹಂತದಲ್ಲಿ ಸಮನ್ವಯ ಸಭೆಯನ್ನು ನಡೆಸಬೇಕು. ಸಭೆ ನಡೆಸದೆ ಲೋಪ ಉಂಟಾದರೆ ಅಂತಹ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.
ಕಠಿಣ ಕ್ರಮಕ್ಕೆ ಶಿಫಾರಸ್ಸಿಗೆ ಸೂಚನೆ:
ಪ್ರಸಕ್ತ ವರ್ಷದ ಕಳೆದ ಜುಲೈ ಮಾಹೆಯಿಂದ ಅಕ್ಟೋಬರ್ ವರೆಗೆ ಪ್ರತಿ ತಾಲ್ಲೂಕಿನಲ್ಲಿ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಕೃಷಿ ಅಂಕಿ ಅಂಶಗಳ ಸಮನ್ವಯ ಸಮಿತಿ 04 ಸಭೆ ನಡೆಸಬೇಕಿತ್ತು, ಆದರೆ ಹೊಸದುರ್ಗ ಮತ್ತು ಮೊಳಕಾಲ್ಮೂರು ತಾಲ್ಲೂಕಿನಲ್ಲಿ 2 ಸಭೆಗಳನ್ನು ಮಾತ್ರ ನಡೆಸಲಾಗಿದೆ. ಸಭೆ ನಡೆಸಲು ವಿಫಲರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಬೇಕು. ಕಳೆದ ಸಭೆಯಲ್ಲಿ ಈ ಸೂಚನೆ ನೀಡಿದ್ದರೂ, ಹೊಸದುರ್ಗ ತಾಲ್ಲೂಕು ಅಂಕಿ ಸಂಖ್ಯೆ ಸಂಗ್ರಹಣೆ ಇಲಾಖೆ ಅಧಿಕಾರಿ ನಿರ್ಲಕ್ಷ್ಯ ತೋರಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸ್ಸು ಮಾಡುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ನಿರ್ದೇಶನ ನೀಡಿದರು.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ನಮೂನೆ-1ರ 3,824 ಬೆಳೆ ಕಟಾವು ಪ್ರಯೋಗ ಪೂರ್ಣಗೊಂಡಿವೆ. ನಮೂನೆ-2ರಲ್ಲಿ 3,495 ಬೆಳೆ ಕಟಾವು ಪ್ರಯೋಗಳಲ್ಲಿ 329 ಪ್ರಯೋಗಗಳು ಪೂರ್ಣಗೊಂಡಿಲ್ಲ. ಈ ಪೈಕಿ ಕಂದಾಯ ಇಲಾಖೆಗೆ 185, ಗ್ರಾಮೀಣಾಭಿವೃದ್ಧಿ ಇಲಾಖೆಗೆ 79, ಕೃಷಿ ಇಲಾಖೆಗೆ 42, ತೋಟಗಾರಿಕೆ ಇಲಾಖೆಗೆ 23 ಪ್ರಯೋಗಳು ಬಾಕಿಯಿವೆ. ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ಅಧಿಸೂಚಿತ 1,026 ಮತ್ತು ಅಧಿಸೂಚಿತವಲ್ಲದ 50 ಸೇರಿ ಒಟ್ಟು 12 ಬೆಳೆಗಳಿಗೆ 1,076 ಬೆಳೆ ಕಟಾವು ಪ್ರಯೋಗ ಕೈಗೊಳ್ಳಲು ಆಯ್ಕೆಯಾಗಿವೆ.
ಕೃಷಿ ಅಂಕಿ ಅಂಶಗಳ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಗೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿದ್ದು, ಸಹಾಯಕ ಕೃಷಿ ನಿರ್ದೇಶಕರು ಹಾಗೂ ತಹಶೀಲ್ದಾರ್ ಅವರ ಜಂಟಿ ದೃಢೀಕರಣದ ಪ್ರಸ್ತಾವದ ಮೇರೆಗೆ ‘ಬೆಳೆ ಸಮೀಕ್ಷೆ’ ಆ್ಯಪ್ನಲ್ಲಿ ಬೆಳೆ ಕ್ಷೇತ್ರ, ವಿಸ್ತೀರ್ಣ, ಮರು ಹೊಂದಾಣಿಕೆ ಮಾಡಲು ಅವಕಾಶ ನೀಡಲಾಗಿದೆ. ಜಿಲ್ಲೆಯ 1,117 ಹಳ್ಳಿಗಳಲ್ಲಿ 7ನೇ ಸಣ್ಣ ನೀರಾವರಿ ಸಮೀಕ್ಷೆಯನ್ನು ಈಗಾಗಲೇ ಆರಂಭಿಸಲಾಗಿದೆ ಎಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರವಿಕುಮಾರ್.ಎನ್ ಸಭೆಯಲ್ಲಿ ಮಾಹಿತಿ ನೀಡಿದರು.
ಜನನ ಪ್ರಮಾಣ ಪತ್ರ ವಿತರಣೆ ಆಂದೋಲನಕ್ಕೆ ಸೂಚನೆ:
ಜಿಲ್ಲೆಯಲ್ಲಿ ಶೇ.99 ರಷ್ಟು ಸಾಂಸ್ಥಿಕ ಹೆರಿಗೆಗಳು ಆಗುತ್ತಿವೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮಗು ಜನನವಾದ ದಿನದಂದೇ ನೊಂದಣಿ ಮಾಡಲು ಕ್ರಮ ವಹಿಸಬೇಕು. ಹೆರಿಗೆ ನಂತರ ಆಸ್ಪತ್ರೆಯಿಂದ ತಾಯಿ ಮಗು ಬಿಡುಗಡೆಯಾಗುವ ಸಮಯದಲ್ಲಿಯೇ ಮಗುವಿನ ಜನನ ಪ್ರಮಾಣ ಪತ್ರವನ್ನು ನೀಡಬೇಕು. ಈ ಸಂಬಂದ ಜಿಲ್ಲೆಯಾದ್ಯಂತ ಜನನ ಪ್ರಮಾಣ ಪತ್ರ ವಿತರಣೆ ಆಂದೋಲನೆ ನಡೆಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಆರೋಗ್ಯ ಇಲಾಖೆ ಅಧಿಕಾರಿಗಳಗೆ ಸೂಚಿಸಿದರು.
ಜನನ ಹಾಗೂ ಮರಣ ದಿನದಿಂದ 21 ದಿನದ ಒಳಗಾಗಿ ನೊಂದಣಿ ಮಾಡುವುದು ಸಂಬಂಧಪಟ್ಟ ಅಧಿಕಾರಿಗಳ ಕರ್ತವ್ಯವಾಗಿದೆ. ಬಳಿಕ ವಿಳಂಬವಾಗಿ ಜನನ ಹಾಗೂ ಮರಣ ನೊಂದಣಿಯನ್ನು ಮಾಡಿದ ಎಲ್ಲಾ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ತಾಲ್ಲೂಕು ಮಟ್ಟದ ನಾಗರಿಕ ನೊಂದಣಿ ಪದ್ದತಿಯ ಸಮನ್ವಯ ಸಮಿತಿ ಸಭೆ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ನಿರ್ದೇಶನ ನೀಡಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ರವಿಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ 1,347 ಹಾಗೂ ನಗರ ಪ್ರದೇಶದಲ್ಲಿ 14 ನೋಂದಣಿ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ಜನವರಿಯಿಂದ ನವೆಂಬರ್ ವರೆಗೆ 17,861 ಜನನ ಹಾಗೂ 15,239 ಮರಣ ನೊಂದಣಿಯಾಗಿವೆ. ಜಿಲ್ಲೆಯಲ್ಲಿ ಬಾಕಿಯಿದ್ದ ಹಳೆಯ 32,650 ಜನನ ಮತ್ತು ಮರಣ ದಾಖಲೆಗಳ ಸ್ಕ್ಯಾನಿಂಗ್ ಹಾಗೂ ಡಿಜಟಲೀಕರಣ ಕಾರ್ಯವನ್ನು ಖಾಸಗಿ ಕಂಪನಿಗೆ ಟೆಂಡರ್ ನೀಡಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಸವಿತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಸಾದ್, ಸಹಾಯಕ ಅಂಕಿ-ಸಂಖ್ಯೆ ಸಂಗ್ರಹಣಾಧಿಕಾರಿ ಅಶ್ವತ್ಥಾಮ, ವೀಣಾ, ಚಂದ್ರಪ್ಪ, ಸಹಾಯಕ ನಿರ್ದೇಶಕರುಗಳಾದ ಶಶಿರೇಖಾ, ಯಾಸಿನ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.








