ನವದೆಹಲಿ : ಹಾರ್ಮುಜ್ ಜಲಸಂಧಿಯನ್ನು ಮುಚ್ಚಲು ಕಾರಣರಾದ ಪ್ರಮುಖ ವ್ಯಕ್ತಿ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಮೂಲಗಳನ್ನು ಆಧಾರಿಸಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ದಾಳಿಯ ಬಗ್ಗೆ ಇರಾನ್ ಅಥವಾ ಇಸ್ರೇಲಿ ಮಿಲಿಟರಿಯಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
ಹೌದು ಹಾರ್ಮುಜ್ ಜಲಸಂಧಿ ಬಳಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನಿನ ನೌಕಾಪಡೆಯ ಮುಖ್ಯಸ್ಥ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿದ್ದಾರೆ. ಈ ಪ್ರದೇಶದಲ್ಲಿ ಈಗಾಗಲೇ ಹೆಚ್ಚಿರುವ ಉದ್ವಿಗ್ನತೆ ಮತ್ತು ಮಿಲಿಟರಿ ಚಟುವಟಿಕೆಗಳು ನಿರಂತರವಾಗಿ ಹೆಚ್ಚುತ್ತಿರುವ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ತಂಗ್ಸಿರಿ ಇರಾನ್ ನೌಕಾಪಡೆಯ ಪ್ರಮುಖ ಕಮಾಂಡರ್ ಆಗಿದ್ದರು ಮತ್ತು ಹಾರ್ಮುಜ್ನಂತಹ ಕಾರ್ಯತಂತ್ರದ ಪ್ರದೇಶದ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಾರ್ಮುಜ್ ಜಲಸಂಧಿ ಮುಚ್ಚಲು ಅವರೇ ಕಾರಣರಾಗಿದ್ದರು.
ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಹಲವು ಮಂದಿ ನಾಯಕರು ಹತ್ಯೆಯಾಗಿದ್ದರೂ ಅಲಿರೆಜಾ ತಂಗ್ಸಿರಿ ಬದುಕಿಳಿದಿದ್ದರು. 2018 ರಿಂದ ನೌಕಾ ಕಮಾಂಡರ್ ಸ್ಥಾನದಲ್ಲಿದ್ದ ಇವರು ಹಾರ್ಮುಜ್ ಜಲಸಂಧಿಯನ್ನು ಮುಚ್ಚುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.ಈ ಜಲಸಂಧಿಯಲ್ಲಿ ಸಾಮಾನ್ಯವಾಗಿ ಪ್ರತಿದಿನ 120 ಕಾರ್ಗೋ ಶಿಪ್ಗಳು ಸಂಚರಿಸುತ್ತವೆ. ಆದರೆ ಮಾರ್ಚ್ 1 ರಿಂದ 25 ರವರೆಗೆ ಕೇವಲ 155 ಹಡಗುಗಳು ಸಂಚರಿಸಿವೆ.
ಈ ಯುದ್ಧದಲ್ಲಿ ಇಲ್ಲಿಯವರೆಗೆ ಅಮೆರಿಕ-ಇಸ್ರೇಲ್ ಇರಾನ್ನ ಮೂರು ಡಜನ್ಗಿಂತಲೂ ಹೆಚ್ಚು ಪ್ರಮುಖ ಮಿಲಿಟರಿ ಕಮಾಂಡರ್ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಈ ದಾಳಿಯು ಈ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಬಹುದು. ಇರಾನ್ ತನ್ನ ಉನ್ನತ ಮಿಟಿಲರಿ ಅಧಿಕಾರಿಯ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವ ಭಯವಿದೆ, ಇದು ಗಲ್ಫ್ ರಾಷ್ಟ್ರಗಳು ಮತ್ತು ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿನ ಭದ್ರತಾ ಬಿಕ್ಕಟ್ಟನ್ನು ಇನ್ನಷ್ಟು ಆಳಗೊಳಿಸುವ ಸಾಧ್ಯತೆ ಇದೆ.






