ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಪಂದ್ಯ ನಡೆಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ತೋರಿದ ಬೆನ್ನಲ್ಲೇ ಆರ್ಸಿಬಿ ಫ್ರಾಂಚೈಸಿ ಸಕಲ ರೀತಿಯಲ್ಲಿ ಸಿದ್ಧತೆ ನಡೆಸಿದೆ. ಮಾ.28ರಂದು ಆರ್ಸಿಬಿ ಹಾಗೂ ಎಸ್ಆರ್ಹೆಚ್ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.
ಇದೇ ವೇಳೆ ಕ್ರೀಡಾಂಗಣದ ಗರಿಷ್ಠ ಆಸನದ ಸಾಮರ್ಥ್ಯ 35 ಸಾವಿರವಿದ್ದರೂ 28 ಸಾವಿರ ಟಿಕೆಟ್ಗಳನ್ನು ಮಾತ್ರ ಮಾರಾಟಕ್ಕೆ ಸೀಮಿತಗೊಳಿಸಲಾಗಿದೆ. ಟಿಕೆಟ್ಗಳು ಪಂದ್ಯದ ಮೂರು ದಿನಗಳ ಮುಂಚೆ ಮಾತ್ರ ಲಭ್ಯವಿ ಇರಲಿವೆ. ಜನದಟ್ಟಣೆ ನಿಯಂತ್ರಿಸಲು ಮೊದಲ ಬಾರಿಗೆ ಕೃತಕ ಬುದ್ದಿ ಮತ್ತೆ (AI) ಹಾಗೂ ಡಿಜಿಟಲ್ ಕ್ಯಾಮರಾಗಳು ಬಳಕೆಯಾಗುತ್ತಿವೆ.
ಕ್ರೀಡಾಂಗಣಕ್ಕೆ ಆಗಮಿಸುವ ಕ್ರೀಡಾಭಿಮಾನಿಗಳ ನೂಕುನುಗ್ಗಲು ನಿಯಂತ್ರಿಸಲು ಎಐ ಬಳಸಲಾಗುತ್ತಿದೆ. ಸ್ಟೇಡಿಯಂನ ಯಾವುದೇ ಪ್ರವೇಶದ್ವಾರಗಳಲ್ಲಿ ಜನದಟ್ಟಣೆ ಕಂಡುಬಂದರೆ ಹೋಲ್ಡಿಂಗ್ ಪ್ರದೇಶಗಳನ್ನು ತಕ್ಷಣ ಮುಚ್ಚಿ ಜನರನ್ನು ಸುರಕ್ಷಿತವಾಗಿ ಆಸನಗಳಿಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ.
ಆರ್ಸಿಬಿ ಪಂದ್ಯಕ್ಕೆ ಟಿಕೆಟ್ ಖರೀದಿ ಕುರಿತಂತೆ ಶೀಘ್ರದಲ್ಲಿ ಮಾರಾಟ ದಿನಾಂಕ ಘೋಷಿಸಲಿದೆ. ಕಾಲ್ತುಳಿತದ ಬಳಿಕ ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗಿದ್ದು, ಅಭಿಮಾನಿಗಳ ಸುರಕ್ಷತೆಗಾಗಿ ಹಲವು ಮುಂಜಾಗ್ರತ ಕ್ರಮಗಳನ್ನ ಕೈಗೊಂಡಿದೆ. ಆನ್ಲೈನ್ ಮೂಲಕ ಶೇ.80ರಷ್ಟು ಟಿಕೆಟ್ ಮಾರಾಟ ಮಾಡಲು ಮುಂದಾಗಿದೆ. ಶೇ.20ರಷ್ಟು ಟಿಕೆಟ್ಗಳನ್ನು ಆಫ್ ಲೈನ್ ಮೂಲಕ ಮಾರಾಟ ಮಾಡಲು ಸಿದ್ಧತೆ ನಡೆಸಿದೆ. ಜನಜಂಗುಳಿ ತಡೆಯಲು ಟಿಕೆಟ್ ಖರೀದಿಸುವವರಿಗೆ ಮೆಟ್ರೋ ಪ್ರಯಾಣ ಉಚಿತವಾಗಿರಲಿದೆ.








