ಹಾಸನ : ಹಾಸನದಲ್ಲಿ ಅಮಾನವೀಯ ಘಟನೆ ಒಂದು ನಡೆದಿದ್ದು ಪತಿಗೆ ಅಕ್ರಮ ಸಂಬಂಧ ಇದ್ದಿದ್ದರಿಂದ ಪತ್ನಿ ಹಾಗೂ ಮಗುವನ್ನು ಮನೆಯಲ್ಲಿ ಕೂಡಿಹಾಕಿ ಪತಿ ಪರಾರಿಯಾಗಿರುವ ಘಟನೆ ಹಾಸನ ನಗರದ ಕೆ.ಆರ್.ಪುರಂ ಬಡಾವಣೆಯಲ್ಲಿ ನಡೆದಿದೆ. ನಿಧಾ ಮತ್ತು ಮೊಹಮ್ಮದ್ ಉಮೇರ್ಗೆ ಮದುವೆಯಾಗಿ 10 ವರ್ಷಗಳಾಗಿದ್ದು, ಒಂದು ಗಂಡು ಮಗುವಿದೆ.
ಮೊಹಮ್ಮದ್ ಉಮೇರ್ ಮಟನ್ ಚಿಕನ್ ವ್ಯಾಪಾರ ಮಾಡಿ ಸ್ವಂತ ಬಿಲ್ಡಿಂಗ್ ಕಟ್ಟಿಸಿ, ಕೋಟಿ ಕೋಟಿ ಹಣ ಮಾಡಿದ್ದಾನೆ.ಮುದ್ದಾದ ಹೆಂಡತಿ, ಮಗು ಖುಷಿಯಾದ ಸಂಸಾರ ನಡೆಸುತ್ತಿದ್ದ, ಆದರೆ ಇದರ ಮಧ್ಯೆ ಮತ್ತೊಂದು ಮಹಿಳೆ ಎಂಟ್ರಿ ಆಗಿರುವ ಶಂಕೆ ವ್ಯಕ್ತವಾಗಿದೆ. ತನ್ನನ್ನು ರೂಮ್ನಲ್ಲಿ ಬಂಧನ ಮಾಡಿ, ಚಿತ್ರಹಿಂಸೆ ನೀಡಿದ್ದಾನೆ ಎಂದು ಪತ್ನಿಯ ಆರೋಪವಾಗಿದೆ. ಈ ಬಗ್ಗೆ ಮಹಿಳೆ ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ನನ್ನನ್ನೂ ಮೂರು ದಿನದಿಂದ ಬಂಧನದಲ್ಲಿ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾಳೆ.
ಪತಿ ಉಮೇರ್ ತನಗೆ ತಲಾಖ್ ನೀಡಲು ಮುಂದಾಗಿದ್ದಾನೆ ಮತ್ತು ಮತ್ತೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ. ಈ ಕಾರಣಕ್ಕಾಗಿ ತನ್ನನ್ನು ಮನೆಯೊಳಗೆ ಕೂಡಿಹಾಕಿ ಮೂರು ದಿನಗಳಿಂದ ನಾಪತ್ತೆಯಾಗಿದ್ದಾನೆ ಎಂದು ಪತ್ನಿ ನಿಧಾ ಆರೋಪಿಸಿದ್ದಾಳೆ. ಪತಿ ಮಾಡುತ್ತಿರುವ ಅನ್ಯಾಯದ ಕುರಿತು ಬಿಲ್ಡಿಂಗ್ನ ಬಾಲ್ಕನಿಯಿಂದಲೇ ತನಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಎಲ್ಲರಿಗೂ ಕೇಳುವಂತೆ ಕೂಗಿ ಕೂಗಿ ನಿಧಾ ಹೇಳಿದ್ದಾಳೆ.
ಇದನ್ನು ನೋಡಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ಸುದ್ದಿ ತಿಳಿದ ಕೆ.ಆರ್.ಪುರಂ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಪೊಲೀಸರಿಗೆ ಈ ಗಂಡ -ಹೆಂಡತಿ ಜಗಳವನ್ನು ಇತ್ಯರ್ಥ ಮಾಡುವುದು ಅಷ್ಟೊಂದು ಸುಲಭ ಇರಲಿಲ್ಲ. ಹಾಗೂ ಮನೆಯ ಒಳಗೆ ಹೋಗಿ ಆಕೆಯನ್ನು ಕಾಪಾಡಲು ಕೂಡ ಆಗಿಲ್ಲ. ಪೊಲೀಸರು ಬಾಲ್ಕನಿಯಿಂದ ಎಲ್ಲವನ್ನು ವಿಚಾರಿಸಿದ್ದಾರೆ. ಆಕೆ ನನ್ನ ಗಂಡ ಮತ್ತೊಂದು ಮಹಿಳೆ ಜತೆಗೆ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿದ್ದಾಳೆ.








