ಬೆಂಗಳೂರು : ರಾಜ್ಯದಲ್ಲಿ ಕೋವಿಡ್‌ಗೆ ವ್ಯಕ್ತಿಯೊಬ್ಬರು ಬಲಿಯಾದ ಬೆನ್ನಲ್ಲೇ, ಸೋಂಕಿನ ಲಕ್ಷಣ ಹೊಂದಿರುವವರನ್ನು ಪರೀಕ್ಷೆಗೊಳಪಡಿಸಲು ಸರ್ಕಾರ ಸೂಚಿಸಿದೆ.
ಈ ನಡುವೆ ರಾಜ್ಯದಲ್ಲಿ ಸೋಂಕು ಪೀಡಿತರ ಸಂಖ್ಯೆ 47ಕ್ಕೆ ಏರಿಕೆ ಆಗಿರುವುದು ಕೊಂಚ ಆತಂಕ ಮೂಡಿಸಿರುವ ನಡುವೆಯೇ ಬೆಂಗಳೂರು ಸೇರಿ 10 ಕಡೆ ಕೋವಿಡ್ ಟೆಸ್ಟಿಂಗ್‌ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ದಿನೇ ದಿನೆ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದೆ. ಪ್ರಸ್ತುತ ರಾಜ್ಯದಲ್ಲಿ 47 ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ಬೆಂಗಳೂರು ಒಂದರಲ್ಲೇ 32 ಪ್ರಕರಣ ದಾಖಲಾಗಿವೆ.
ಕೋವಿಡ್ -19 ರ ತಪಾಸಣಾ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸುವುದು ಮತ್ತು ಪರೀಕ್ಷಾ ಮಾದರಿಗಳನ್ನು ನಿಗದಿಪಡಿಸಿದ ಪ್ರಯೋಗಶಾಲೆಗಳಿಗೆ ಪರೀಕ್ಷೆಗಾಗಿ ಸಲ್ಲಿಸುವ ಕುರಿತು ಆರೋಗ್ಯ ಇಲಾಖೆ ಮಹತ್ವದ ಸೂಚನೆ ನೀಡಿದೆ.
ಮೇಲ್ಕಂಡ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, RT-PCR & RAT ಕೋವಿಡ್-19 ರ ಪರೀಕ್ಷೆ ನಡೆಸಲು ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯದಂತೆ ದಿನ ನಿತ್ಯ 150 ರಿಂದ 200 ಪರೀಕ್ಷೆಗೆ ನಿಗದಿಪಡಿಸಲಾಗಿದ್ದು, ಎಲ್ಲಾ SARI ಪ್ರಕರಣಗಳಿಗೆ ಕೋವಿಡ್ ಸೋಂಕನ್ನು ಧೃಡ ಪಡಿಸಿಕೊಳ್ಳಲು RT-PCR ಪರೀಕ್ಷೆಗೆ ಕಡ್ಡಾಯವಾಗಿ ಒಳಪಡಿಸುವುದು. ಎಲ್ಲಾ ಪರೀಕ್ಷೆಗಳನ್ನು ಕಡ್ಡಾಯವಾಗಿ ಸರ್ಕಾರಿ ಪ್ರಯೋಗ ಶಾಲೆಗಳಲ್ಲಿಯೇ ನಡೆಸುವುದು ಹಾಗೂ ಲಭ್ಯವಿರುವ ಕೋವಿಡ್-19ರ ಪರೀಕ್ಷಾ ಕಿಟ್‌ಗಳನ್ನು FIFO (First In First Out) ಮಾದರಿಯಲ್ಲಿ ಉಪಯೋಗಿಸಿ ಕೋವಿಡ್-19 ರ ಕಿಟ್ / ಪರಿಕರಗಳು ಅನುಪಯುಕ್ತವಾಗದಂತೆ ಕೋವಿಡ್-19ರ ಪರೀಕ್ಷೆಯನ್ನು ಈ ಕೆಳಕಂಡಂತೆ ಕ್ರಮವಹಿಸುವುದು.
- ಎಲ್ಲಾ SARI ಪ್ರಕರಣಗಳಿಗೆ ಕಡ್ಡಾಯವಾಗಿ ಪರೀಕ್ಷೆ ನಡೆಸುವುದು.
- ವಯೋವೃದ್ಧರಲ್ಲಿ ಮಕ್ಕಳಲ್ಲಿ, ಗರ್ಭಿಣಿ ಸ್ತ್ರೀಯಲ್ಲಿ ರೋಗ ಲಕ್ಷಣಗಳು ಕಂಡು ಬಂದಲ್ಲಿ ಕಡ್ಡಾಯವಾಗಿ ಪರೀಕ್ಷೆ ನಡೆಸುವುದು.
- ಅನುಬಂಧ-1ರಂತೆ ಕೋವಿಡ್-19ರ ಪರೀಕ್ಷಾ ಮಾದರಿಯನ್ನು ಪ್ರಯೋಗಶಾಲೆಗಳಿಗೆ ಅದೇ ದಿನ ತಲುಪುವಂತೆ ಕ್ರಮವಹಿಸುವುದು.