ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ಅವಾಂತರಗಳು ಸೃಷ್ಟಿಯಾಗುತ್ತಿವೆ. ನಿನ್ನೆ ಬೆಂಗಳೂರಿನಲ್ಲಿ ಮಹಾಮಳೆಗೆ ಒಂದೇ ದಿನ ಮೂವರು ಬಲಿಯಾಗಿದ್ದಾರೆ. ವೈಟ್ ಫೀಲ್ಡ್ ನಲ್ಲಿ ಗೋಡೆ ಕುಸಿದು ಓರ್ವ ಮಹಿಳೆ ಸಾವನ್ನಪ್ಪಿದ್ದರೆ, ಬಿಟಿಎಂ ಲೇಔಟ್ ನಲ್ಲಿ ಅಪಾರ್ಟ್ಮೆಂಟ್ ಬೇಸ್ಮೆಂಟ್ ನಲ್ಲಿದ್ದ ನೀರು ಹೊರ ಹಾಕುವಾಗ ವಿದ್ಯುತ್ ಶಾಕ್ ನಿಂದ ಓರ್ವ ಬಾಲಕ ಸೇರಿದಂತೆ ಇಬ್ಬರು ಸಾವನಪ್ಪಿದ್ದಾರೆ.
ಹಾಗಾಗಿ ಇಂದು ಬಿಟಿಎಂ ಲೇಔಟ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಭೇಟಿ ನೀಡಿದ್ದಾರೆ. ಮಧುವನ ಅಪಾರ್ಟ್ಮೆಂಟ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಾರ್ಟ್ಮೆಂಟ್ನ ಬೇಸ್ಮೆಂಟ್ ನಲ್ಲಿ ಮಳೆ ನೀರು ಸಂಗ್ರಹವಾಗಿತ್ತು. ನೀರು ಹೊರ ಹಾಕಲು ಯತ್ನಿಸುವಾಗ ವಿದ್ಯುತ್ ಶಾಕ್ ನಿಂದ ನಿನ್ನೆ ಇಬ್ಬರು ಸಾವನಪ್ಪಿದ್ದರು. ಮನಮೋಹನ್ ಕಾಮತ್ ಹಾಗೂ 9 ವರ್ಷದ ಬಾಲಕ ದಿನೇಶ್ ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿದ್ದರು.
ಮೃತಪಟ್ಟ ಕುಟುಂಬಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಇದೀಗ ಸಾಂತ್ವನ ಹೇಳಿದ್ದಾರೆ. ಮನಮೋಹನ್ ಕಾಮತ್ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರದ ಚೆಕ್ ನೀಡಿದ್ದೇನೆ. ಇನ್ನು ಮೃತ ಬಾಲಕ ದಿನೇಶ್ ಕುಟುಂಬಕ್ಕೆ ನಾಳೆ ಪರಿಹಾರ ನೀಡುತ್ತೇನೆ. ಮಳೆಯಿಂದ ಆಗಿರುವ ಸಮಸ್ಯೆಗಳಿಗೆ ನಿಯಮದ ಪ್ರಕಾರ ಪರಿಹಾರ ನೀಡಲಾಗುತ್ತದೆ. ನಮ್ಮ ಅಧಿಕಾರಿಗಳು 24 ಗಂಟೆಯೂ ಕೆಲಸ ಮಾಡುತ್ತಿದ್ದಾರೆ. ಟೀಕೆ ಮಾಡುವವರೇ ಬೆಂಗಳೂರಿಗೆ ಕೆಟ್ಟ ಹೆಸರು ತರುತ್ತಿದ್ದಾರೆ. ಅದರ ಬಗ್ಗೆ ನಾನು ಮಾತನಾಡಲ್ಲ. ಟೀಕೆಗಳು ಸಾಯುತ್ತವೆ ಕೆಲಸ ಉಳಿಯುತ್ತದೆ ಎಂದು ಡಿಕೆ ಶಿವಕುಮಾರ್ ಪುನರುಚ್ಚರಿಸಿದರು.