ಬೆಂಗಳೂರು : ಬೆಂಗಳೂರಲ್ಲಿ ರೌಡಿ ಶೀಟರ್ ಬಿಕ್ಲು ಶಿವಕುಮಾರ್ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಭೈರತಿ ಬಸವರಾಜು ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯಿದೆ ವಿಧಿಸಿದ್ದ ಸರ್ಕಾರದ ಕ್ರಮವನ್ನು ರದ್ದುಪಡಿಸಿರುವ ಹೈಕೋರ್ಟ್, ಇದೇ ಆರೋಪ ಸಂಬಂಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸುವುದಕ್ಕೆ ನಿರಾಕರಿಸಿದೆ. ಜತೆಗೆ, ಪ್ರಕರಣ ಸಂಬಂಧ ಕೋರಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಈ ಆದೇಶದಿಂದ ಈ ಹಿಂದೆ ಮಂಜೂರಾಗಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನು ರದ್ದಾದಂತಾಗಿದ್ದು, ಭೈರತಿ ಬಸವರಾಜು ಅವರಿಗೆ ಬಂಧನ ಭೀತಿ ಎದುರಾದಂತಾಗಿದೆ. ಬಿಕ್ಲು ಶಿವಕುಮಾರ್ ಕೊಲೆ ಪ್ರಕರಣದಲ್ಲಿ ತಮ್ಮ ವಿರುದ್ದ ದಾಖಲಾಗಿದ್ದ ಕೋಕಾ ಕಾಯಿದೆ ಮತ್ತು ಎಫ್ಐಆರ್ ರದ್ದು ಮಾಡುವುದು ಹಾಗೂ ನಿರೀಕ್ಷಣಾ ಜಾಮೀನು ಕೋರಿ ಭೈರತಿ ಬಸವರಾಜು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ತ ಯಾದವ್ ಅವರಿದ್ದ ನ್ಯಾಯಪೀಠ ಅರ್ಜಿಯನ್ನು ಭಾಗಶಃ ಪುರಸ್ಕರಿಸಿದೆ. ಕೋಕಾ ಕಾಯಿದೆ ರದ್ದುಮಾಡಿದ್ದು, ಇನ್ನುಳಿದ ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿದೆ. ಕೋಕಾ ಕಾಯಿದೆ ಜಾರಿ ಮಾಡುವಲ್ಲಿ ಸರಿಯಾದ ಪ್ರಕ್ರಿಯೆಗಳನ್ನು ಅನುಸರಿಲ್ಲ. ಆದ್ದರಿಂದ ಕೋಕಾಯಿದೆ ರದ್ದುಮಾಡಲಾಗಿದೆ.








